;Resize=(412,232))
ಬೆಂಗಳೂರು : ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನಿಂದ ಅಂಕಪಟ್ಟಿ ಜೊತೆಗೆ, ಅವರ ಹಾಜರಾತಿ, ನಡವಳಿಕೆ ಸೇರಿ ಸರ್ವತೋಮುಖ ಬೆಳವಣಿಗೆ ಬಿಂಬಿಸುವ ‘ಸಮಗ್ರ ಪ್ರಗತಿ ಪತ್ರ’ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಎಲ್‌ಕೆಜಿಯಿಂದ ಪದವಿ ಪೂರ್ವ ಕಾಲೇಜಿನವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಗತಿ ಪತ್ರ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಗತಿ ಪತ್ರ ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದ್ದು, ಪೋಷಕರ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್‌ಗೆ ನೇರವಾಗಿ ರವಾನೆಯಾಗಲಿವೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ಮಾದರಿಯ ಪ್ರಗತಿ ಪತ್ರದಲ್ಲಿ ಪರೀಕ್ಷೆಯ ಅಂಕಗಳಷ್ಟೇ ಅಲ್ಲದೆ, ವಿದ್ಯಾರ್ಥಿಯ ನಡವಳಿಕೆ, ಹಾಜರಾತಿ, ಶಿಕ್ಷಕರ ಅಭಿಪ್ರಾಯ ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಯ ಮಾಹಿತಿ ಅಡಕವಾಗಿರಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಪ್ರಗತಿ ಪತ್ರ ಪೋಷಕರಿಗೆ ಕಳುಹಿಸಲಾಗುತ್ತದೆ. ಈ ಹೊಸ ವ್ಯವಸ್ಥೆಯು 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಪೋಷಕರು ವಿಶೇಷವಾಗಿ ವಿನಂತಿಸಿದಾಗ ಅಥವಾ ವಿದ್ಯಾರ್ಥಿಯು ವರ್ಗಾವಣೆ ಪ್ರಮಾಣ ಪತ್ರ ಪಡೆದು ಬೇರೆ ಶಾಲೆಗೆ ಸೇರುವ ಸಂದರ್ಭದಲ್ಲಿ ಮಾತ್ರ ಭೌತಿಕ ಪ್ರತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳದ್ದಾರೆ.