ಬೆಳ್ತಂಗಡಿ : ಕ್ಷೇತ್ರದ ಕುರಿತಾಗಿ ಇತ್ತೀಚೆಗೆ ನಡೆದ ಆಘಾತಗಳಿಂದ ನಾನು ಕೂಡ ಜರ್ಝರಿತಗೊಂಡಿದ್ದೇನೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವುದು ಷಡ್ಯಂತ್ರ ಎಂಬುದು ನ್ಯಾಯಾಲಯದಲ್ಲೇ ಗೊತ್ತಾಗಿದೆ. ಎತ್ತರದ ಬೆಟ್ಟದಲ್ಲಿ ನೀರು ನಿಲ್ಲುವುದಿಲ್ಲ, ಅದು ಜಾರಿ ಕೆಳಗೆ ಬರಲೇಬೇಕು. ಮುಂದಕ್ಕೆ ಎಲ್ಲಾ ಕಷ್ಟಗಳು ಹೋಗುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಎಸ್‌ಡಿಎಂ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ 56 ಶಿಕ್ಷಣ ಸಂಸ್ಥೆಗಳ ಸುಮಾರು 10,000 ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ, ಹಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಲ್ಲಾ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಮಾಜದ ಸಭ್ಯ ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.