;Resize=(412,232))
ಮಂಗಳೂರು : ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ, ಜನಸಾಮಾನ್ಯರ ಬದುಕಿಗೆ ಆಸರೆ ಆಗಿರುವ ಸಹಕಾರ ರಂಗದ ಧೀಮಂತ ನಾಯಕ, ಸಹಕಾರ ರತ್ನ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರಿಸುವ ಕಾರ್ಯಕ್ರಮ ಗುರುವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ಸಭಾಂಗಣದಲ್ಲಿ ನಡೆಯಲಿದೆ.
ಸಹಕಾರ ಕ್ಷೇತ್ರದ ಮೂಲಕ ಆರ್ಥಿಕ ಪ್ರಗತಿ, ಸಾಮಾಜಿಕ ಕಳಕಳಿ ಹಾಗೂ ಜನಸೇವೆಗೆ ಮಹತ್ವದ ಕೊಡುಗೆ ನೀಡಿರುವ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಅವರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶುಭ ಹಾರೈಸುವ ಉದ್ದೇಶದಿಂದ ಈ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದ ದುರ್ಬಲ ವರ್ಗದವರ ಸಂಕಷ್ಟಗಳಿಗೆ ಸ್ಪಂದಿಸುವುದು, ಅಶಕ್ತರಿಗೆ ನೆರವಿನ ಹಸ್ತ ಚಾಚುವುದು ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಅಶಕ್ತರಿಗೆ ನೆರವು ವಿತರಿಸುವುದರ ಜೊತೆಗೆ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರಿಸಲಾಗುವುದು.
ಸಾರ್ವಜನಿಕ ಸೇವಾ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಅಗತ್ಯವಿರುವವರಿಗೆ ಸಕಾಲದಲ್ಲಿ ನೆರವು ತಲುಪಿಸುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರ ಕ್ಷೇತ್ರವು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂಬ ಆಶಯವನ್ನು ಡಾ। ಎಂ.ಎನ್. ರಾಜೇಂದ್ರ ಕುಮಾರ್ ಸದಾ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಈ ಸಮಾಜಮುಖಿ ಸೇವಾ ಕಾರ್ಯಗಳ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸಿ, ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ। ಎಂ.ಮೋಹನ್ ಆಳ್ವ ಹಾಗೂ ಉಡುಪಿ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪಾ ಭಾಗವಹಿಸಲಿದ್ದಾರೆ.
ಶಿಕ್ಷಣ, ಸಮಾಜಸೇವೆ ಹಾಗೂ ಆಡಳಿತ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಸಾರ್ವಜನಿಕ ಸೇವೆಯ ಮಹತ್ವವನ್ನು ಸಾರುವ ವೇದಿಕೆಯಾಗಲಿದೆ. ಸಹಕಾರ ಕ್ಷೇತ್ರದ ಮೂಲಕ ಜನರ ವಿಶ್ವಾಸ ಗಳಿಸಿರುವ ಡಾ। ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ನಡೆಯುವ ಈ ಕಾರ್ಯಕ್ರಮ ಮಾನವೀಯತೆ, ಪರಸ್ಪರ ಸಹಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವದೊಂದಿಗೆ ನಡೆಯಲಿದೆ ಎಂದು ಎಸ್ಸಿಡಿಸಿಸಿ ಬ್ಯಾಂಕಿನ ಪ್ರಕಟಣೆ ತಿಳಿಸಿದೆ.