;Resize=(412,232))
ಮಂಗಳೂರು : ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಾಗಿದ್ದು, ಇಲ್ಲಿ ಅನೇಕ ಕನ್ನಡ ಮಾಧ್ಯಮ ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಪ್ರಮುಖ ಹುದ್ದೆಗಳಿಗೆ ಕನ್ನಡ ಭಾಷೆ ತಿಳಿದಿರುವ ಹಾಗೂ ಕನ್ನಡ ಮಾಧ್ಯಮ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಶಿಕ್ಷಕರನ್ನು ನೇಮಕ ಮಾಡುವುದು ಅತ್ಯಂತ ಅಗತ್ಯವಾಗಿದೆ. ಆದರೆ ಕೇರಳದ ಶಿಕ್ಷಣ ಇಲಾಖೆಯು ನಿಯಮವನ್ನು ಗಾಳಿಗೆ ತೂರಿ ಮಲಯಾಳಿ ಭಾಷಿಗರನ್ನು ನೇಮಿಸಿದೆ ಎಂದು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ಹೊರಹಾಕಿವೆ.
ಕೇರಳದ ಶಿಕ್ಷಣ ಇಲಾಖೆ ಕಾರ್ಯದರ್ಶಿ ಇತ್ತೀಚಿನ ಆದೇಶದಂತೆ ಕಾಸರಗೋಡು ಮತ್ತು ಮಂಜೇಶ್ವರ ಬಿಆರ್‌ಸಿ ಕೇಂದ್ರಕ್ಕೆ ಮಲಯಾಳಿ ಭಾಷಿಕರನ್ನು ನೇಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇವರಿಗೆ ಕನ್ನಡ ಭಾಷಾ ಜ್ಞಾನವಿಲ್ಲವೆಂದು ತಿಳಿದುಬಂದಿದ್ದು, ಈ ನೇಮಕಾತಿ ಕನ್ನಡ ಮಾಧ್ಯಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.ಈ ಹುದ್ದೆಗಳಿಗೆ ಕನ್ನಡ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಶಿಕ್ಷಕರು ಅರ್ಜಿ ಸಲ್ಲಿಸಿದರೂ ಇಂತಹ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸದೆ ಕನ್ನಡ ಭಾಷೆ ತಿಳಿಯದವರನ್ನು ನೇಮಿಸಿರುವುದು ಆಯ್ಕೆ ಪ್ರಕ್ರಿಯೆಯ ಕನ್ನಡಕ್ಕೆ ಎಸಗಿದ ಅನ್ಯಾಯವಾಗಿದೆ ಎಂದು ಸಂಘಟನೆ ಆರೋಪಿಸಿವೆ.
ಕನ್ನಡ ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಭಾಷಾ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಆದೇಶವನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಅಭ್ಯರ್ಥಿಗಳ ಕನ್ನಡ ಭಾಷಾ ಜ್ಞಾನ, ಕನ್ನಡ ಮಾಧ್ಯಮ ಪ್ರದೇಶದಲ್ಲಿ ಸೇವಾ ಅನುಭವ ಹಾಗೂ ಅರ್ಹತೆಗಳಿಗೆ ಸೂಕ್ತ ಆದ್ಯತೆ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅರ್ಜಿ ಸಲ್ಲಿಸಿದ ಅರ್ಹ ಕನ್ನಡ ಮಾಧ್ಯಮ ಶಿಕ್ಷಕರನ್ನು ನ್ಯಾಯಸಮ್ಮತವಾಗಿ ಪರಿಗಣಿಸಿ, ಆಯ್ಕೆ ಮಾನದಂಡ, ಮೆರಿಟ್ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಬಿಆರ್‌ಸಿ ಹಾಗೂ ಇತರ ಪ್ರಮುಖ ಶೈಕ್ಷಣಿಕ ಹುದ್ದೆಗಳಿಗೆ ಕನ್ನಡ ತಿಳಿದಿರುವ ಅರ್ಹ ಅಧಿಕಾರಿಗಳು ಮತ್ತು ಶಿಕ್ಷಕರನ್ನು ನೇಮಕ ಮಾಡುವ ಸ್ಪಷ್ಟ ಆದೇಶವಿದ್ದರೂ, ಸರ್ಕಾರದ ಇಲಾಖೆಗಳು ತಪ್ಪು ಮಾಡುತ್ತಿವೆ. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಯಾವುದೇ ಭಾಷಾ ಅನಾನುಕೂಲತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.