;Resize=(412,232))
ಮಂಗಳೂರು : ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಓರ್ವ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಇನ್ನೂ 8 ಜನರು ಗಾಯಗೊಂಡಿರುವ ಘಟನೆಯು ಮಂಗಳೂರು ಹೊರವಲಯದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಶಿಫ್ಟ್ ಅವಧಿ ಮುಗಿದ ಬಳಿಕ ಒಳಗೆ ಹೆಚ್ಚಿನ ಸಿಬ್ಬಂದಿ ಇಲ್ಲದ ಕಾರಣ ಸಂಭವಿಸಬಹುದಾದ ಭಾರಿ ಸಾವು-ನೋವು ತಪ್ಪಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿ ನಿವಾಸಿ, ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರ (30) ಮೃತರು. ಕುಳಿತ ಸ್ಥಿತಿಯಲ್ಲಿಯೇ ಸುಟ್ಟು ಕರಕಲಾದ ದೇಹ ಪತ್ತೆಯಾಗಿದೆ. ಕಾರ್ಮಿಕ ರಾಜೇಶ್ ಬ್ಯಾಪ್ಟಿಸ್ಟ್ ಎಂಬುವವರ ದೇಹ ಶೇ.35ರಷ್ಟು ಸುಟ್ಟುಹೋಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಕ್ಕಂತೆ ಗಾಯಗೊಂಡ 8 ಮಂದಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗ್ಗೆ 11.30ಕ್ಕೆ ಶಿಫ್ಟ್ ಬದಲಾವಣೆ ಹಿನ್ನೆಲೆಯಲ್ಲಿ ಕಾರ್ಮಿಕರು ಘಟಕದಿಂದ ಹೊರ ಹೋದ ಕಾರಣ ಭಾರಿ ಅನಾಹುತ ತಪ್ಪಿದೆ.
ಎಂಆರ್‌ಪಿಎಲ್‌ನ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮಧ್ಯಾಹ್ನ 2.47ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಅಧಿಕಾರಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಾಹ್ನ 12.20ರ ಸುಮಾರಿಗೆ ಎಂಆರ್‌ಪಿಎಲ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿತ್ತು. ಬಳಿಕ ಪ್ರದೇಶದಾದ್ಯಂತ ದಟ್ಟ ಹೊಗೆ ಆವರಿಸಿ ಭಾರೀ ಆತಂಕ ಸೃಷ್ಟಿಸಿತು. ಸ್ಫೋಟದ ತೀವ್ರತೆಗೆ ಸಮೀಪದ ವಸತಿ ಪ್ರದೇಶ ಹಾಗೂ ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿದೆ. ಪರಿಣಾಮ ಜನತೆ ಆತಂಕಕ್ಕೊಳಗಾಗಿ ಮನೆಯಿಂದ ಹೊರಬಂದರು. ಶಾಲೆಗಳಿಗೆ ರಜೆ ನೀಡಲಾಯಿತು. ಮಂಗಳೂರು ವಿಮಾನ ನಿಲ್ದಾಣದ ಗಾಜುಗಳು ಪುಡಿಯಾಗಿವೆ ಎಂದು ಸುದ್ದಿ ಹಬ್ಬಿತ್ತು. ಬಳಿಕ ವಿಮಾನ ನಿಲ್ದಾಣದ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದು, ಕೇವಲ ಕಂಪನದ ಅನುಭವ ಉಂಟಾಗಿದೆ ಎಂದಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಜಿಲ್ಲಾಧಿಕಾರಿಗೆ ಮೇಲುಸ್ತುವಾರಿ ವಹಿಸುವಂತೆ ಸೂಚಿಸಿದ್ದು ಘಟನೆ ಬಗ್ಗೆ ವರದಿಯನ್ನು ನೀಡುವಂತೆ ತಿಳಿಸಿದ್ದೇನೆ. ಬೆಂಕಿ ನಂದಿಸುವಲ್ಲಿ ಸ್ಥಳೀಯರು ಕೂಡ ನೆರವಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಂಕಿ ಸಂಪೂರ್ಣವಾಗಿ ತಹಬದಿಗೆ ಬಂದಿದೆ.