ಸ್ಮಾರ್ಟ್ಸಿಟಿ, ಕಡಲನಗರಿ ಮಂಗಳೂರು ಸಹಕಾರ ಸಂಭ್ರಮಕ್ಕೆ ಸಿಂಗಾರಗೊಂಡಿದೆ. ನಗರದ ರಾಜಬೀದಿಗಳಲ್ಲಿ ಸಹಕಾರಿ ತೋರಣಗಳು ಕಂಗೊಳಿಸುತ್ತಿದ್ದರೆ, ಕರಾವಳಿ ಉತ್ಸವ ಮೈದಾನದಲ್ಲಿ ವಿಶಾಲವಾದ ಸಭಾಂಗಣದ ಚಪ್ಪರ, ಆಕರ್ಷಕ ವೇದಿಕೆ ಸಿದ್ಧಗೊಂಡಿದೆ
ಮಂಗಳೂರು : ಸ್ಮಾರ್ಟ್ಸಿಟಿ, ಕಡಲನಗರಿ ಮಂಗಳೂರು ಸಹಕಾರ ಸಂಭ್ರಮಕ್ಕೆ ಸಿಂಗಾರಗೊಂಡಿದೆ. ನಗರದ ರಾಜಬೀದಿಗಳಲ್ಲಿ ಸಹಕಾರಿ ತೋರಣಗಳು ಕಂಗೊಳಿಸುತ್ತಿದ್ದರೆ, ಕರಾವಳಿ ಉತ್ಸವ ಮೈದಾನದಲ್ಲಿ ವಿಶಾಲವಾದ ಸಭಾಂಗಣದ ಚಪ್ಪರ, ಆಕರ್ಷಕ ವೇದಿಕೆ ಸಿದ್ಧಗೊಂಡಿದೆ. ನ.20ರಂದು 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷ ಡಾ। ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಈ ಬೃಹತ್ ಸಹಕಾರ ಮಹೋತ್ಸವ ನಡೆಯಲಿದೆ. ಸುಮಾರು 15 ಸಾವಿರಕ್ಕೂ ಅಧಿಕ ಸಹಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಬೃಹತ್ ಸಹಕಾರ ಜಾಥಾ, ಆಕರ್ಷಕ ಸ್ತಬ್ಧಚಿತ್ರಗಳು ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ.
ಕರಾವಳಿ ಉತ್ಸವ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಮುಂಭಾಗದಲ್ಲಿ ಸಹಕಾರಿ ಬಂಧುಗಳಿಗಾಗಿ ನಾಲ್ಕು ಹಂತಗಳಲ್ಲಿ ವಿಶಾಲವಾದ ಆಸನ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ ವಿವಿಐಪಿ, ವಿಐಪಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಆಸನಗಳನ್ನು ಕಾಯ್ದಿರಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಬ್ಯಾರಿಕೇಡ್ಗಳನ್ನು ಅಳವಡಿಸಿ ವಿವಿಧ ವಿಭಾಗಗಳನ್ನು ಪ್ರತ್ಯೇಕಿಸಲಾಗಿದೆ. ಸಭಾಂಗಣದಾದ್ಯಂತ ತಂಪಿನ ವಾತಾವರಣ ಕಲ್ಪಿಸಲು ಬೃಹತ್ ಫ್ಯಾನ್ಗಳನ್ನೂ ಅಳವಡಿಸಲಾಗಿದೆ.
ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 2024ನೇ ಸಾಲಿನಿಂದ ‘ಸಹಕಾರ ಮಾಣಿಕ್ಯ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ. ಇದು ಈ ವರ್ಷ ಪ್ರಶಸ್ತಿಯೊಂದಿಗೆ 5 ಗ್ರಾಂ ಚಿನ್ನದ ಪದಕ, ₹10 ಸಾವಿರ ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ.
ಅಲ್ಲದೆ, ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರಶಸ್ತಿಗೆ ಉಭಯ ಜಿಲ್ಲೆಗಳಿಂದ ತಲಾ ಒಂದು ಸಂಘವನ್ನು ಆಯ್ಕೆ ಮಾಡಲಾಗುತ್ತದೆ. ಹೈನುಗಾರಿಕೆ, ಕ್ರೆಡಿಟ್ ಸೊಸೈಟಿ, ಮೀನುಗಾರಿಕೆ, ಸೌಹಾರ್ದ ಹಾಗೂ ಮಹಿಳಾ ಸಹಕಾರಿ ಸಂಘಗಳ ವಿಭಾಗದಲ್ಲೂ ಉಭಯ ಜಿಲ್ಲೆಗಳಿಂದ ತಲಾ ಒಂದು ಸಂಘಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ಇದರೊಂದಿಗೆ ಶತಮಾನೋತ್ಸವ ಪೂರೈಸಿದ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕನ್ನು ಗೌರವಿಸಲಾಗುತ್ತದೆ.
40ಕ್ಕೂ ಅಧಿಕ ಸ್ತಬ್ಧಚಿತ್ರಗಳ ಜಾಥಾ:
ನ.20ರಂದು ಬೆಳಗ್ಗೆ 9ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ಬೃಹತ್ ಸಹಕಾರ ಜಾಥಾ ನಡೆಯಲಿದೆ. ಸಹಕಾರ ಕ್ಷೇತ್ರದ ಸಾಧನೆ, ಗ್ರಾಮೀಣ ಬದುಕು, ಕರಾವಳಿಯ ಸಂಸ್ಕೃತಿ ಹಾಗೂ ಕೃಷಿ ಚಟುವಟಿಕೆಗಳ ವೈವಿಧ್ಯವನ್ನು ಬಿಂಬಿಸುವ 40ಕ್ಕೂ ಅಧಿಕ ಸ್ತಬ್ಧಚಿತ್ರಗಳು ಜಾಥಾದಲ್ಲಿ ಸಾಗಲಿವೆ. ಸಹಕಾರ ರಥ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು ಜಾಥಾದ ಮೆರುಗು ಹೆಚ್ಚಿಸಲಿವೆ.
ಸಹಕಾರ ಕ್ಷೇತ್ರದ ಹಿರಿಮೆ
ಮಂಗಳೂರಿನಲ್ಲಿ ಶುಕ್ರವಾರ ನಡೆಯಲಿರುವ 73ನೇ ಸಹಕಾರ ಸಪ್ತಾಹದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಕರುನಾಡಿನ ವೈವಿಧ್ಯತೆ ಹಾಗೂ ಸಹಕಾರ ಕ್ಷೇತ್ರದ ಹಿರಿಮೆಯನ್ನು ಬಿಂಬಿಸುವ ಸಹಕಾರ ಜಾಥಾ ವಿಶೇಷ ಆಕರ್ಷಣೆ ಆಗಲಿದೆ. 15 ಸಾವಿರಕ್ಕೂ ಅಧಿಕ ಸಹಕಾರಿ ಬಂಧುಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅವರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ। ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಮೊಳಹಳ್ಳಿ ಶಿವರಾಯರ ಸ್ತಬ್ಧಚಿತ್ರ, ಬ್ಯಾಂಕಿಂಗ್ ವ್ಯವಹಾರ, ಹೈನುಗಾರಿಕೆ, ಮೀನುಗಾರಿಕೆ, ಕೃಷಿ ಉಪಕರಣಗಳ ಮಾರಾಟ, ನಂದಿನಿ ಅನ್ವೀಲ್, ರಾಣಿ ಅಬ್ಬಕ್ಕ, ನವೋದಯ ಗುಂಪು, ಪತ್ತಿನ ಸಂಘಗಳ ಹಣಕಾಸು ವ್ಯವಹಾರ ಹಾಗೂ ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ. ಜೊತೆಗೆ ಭುವನೇಶ್ವರಿ ದೇವಿ, ಘಟೋತ್ಕಜ, ನಂದಿ, ಡೊಳ್ಳು ಕುಣಿತ, ಮಹಿಳೆಯರ ವೀರಗಾಸೆ, ವಾದಿರಾಜ ವಾಲಗ ಮಂಡಳಿ, ಸುಗ್ಗಿ ಕುಣಿತ, ಮಂಗಳೂರು ದಸರಾ ಸ್ತಬ್ಧ ಚಿತ್ರ, ಪುರವಂತಿಗೆ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧ ಚಿತ್ರ, ಗೋರವನ ಕುಣಿತ, ತುಳುನಾಡ ವೈಭವ, ಕೃಷಿ ಪತ್ತಿನ ಸಹಕಾರಿ ಸಂಘಗಳ ಸ್ತಬ್ಧಚಿತ್ರಗಳೂ ಜಾಥದಲ್ಲಿ ಭಾಗವಹಿಸಲಿವೆ. ಹೊನ್ನಾವರ ಬ್ಯಾಂಡ್ ಹಾಗೂ ಎಸ್ಸಿಡಿಸಿಸಿ ಬ್ಯಾಂಕ್ನ ಮೊಬೈಲ್ ಬ್ಯಾಂಕ್ ವಾಹನ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಲಿವೆ.---
