ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಮಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೋಡ್ ಶೋ ನಡೆಸಲಿರುವ ಪ್ರದೇಶದಲ್ಲಿರುವ ಜೇನುಗೂಡುಗಳನ್ನು ತೆರವುಗೊಳಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಗುರುವಾರ ಪತ್ರ ಬರೆದಿದ್ದಾರೆ.
ನಾರಾಯಣ ಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಹಾಗಾಗಿ ರೋಡ್ ಶೋ ನಡೆಯುವ ಸ್ಥಳ, ಪಾರ್ಕಿಂಗ್ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೋಡ್ ಶೋ ನಡೆಯುವ ಸ್ಥಳದ ಆಸುಪಾಸಿನ ಎಲ್ಲ ಕಟ್ಟಡಗಳು, ಸೇಫ್ ಹೌಸ್ ಮತ್ತು ಸೇಫ್ ಆಸ್ಪತ್ರೆಗಳಾದ ಎಜೆ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ, ಮಂಗಳೂರು ನಗರ ಪಾಲಿಕೆಯ ಆಯುಕ್ತರ ಕಚೇರಿ, ಎಸ್‌ಡಿಎಂ ಕಾನೂನು ಕಾಲೇಜು, ಸರ್ಕ್ಯೂಟ್ ಹೌಸ್ ಮತ್ತಿತರ ಕಡೆಗಳಲ್ಲಿನ ಜೇನುಗೂಡುಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಪ್ರಧಾನಿಯ ವಿಶೇಷ ಭದ್ರತಾ ಪಡೆಯ ಆದೇಶದಂತೆ ಪೊಲೀಸ್ ಕಮಿಷನರ್ ಈ ಸೂಚನೆ ಹೊರಡಿಸಿದ್ದಾರೆ.
ಈ ಸೂಚನೆಗೆ ಪರಿಸರವಾದಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ನಡೆದಿದೆ.
ಹವಾಮಾನ ಬದಲಾವಣೆಯಿಂದಾಗಿ ಈಗಾಗಲೇ ಜೇನು ಸಂತತಿ ವಿನಾಶದ ಹಾದಿಯಲ್ಲಿದೆ. ಜೇನು ಇಲ್ಲದಿದ್ದರೆ ಪರಾಗ ಸ್ಪರ್ಶವಾಗದು. ಮುಂದೆ ಆಹಾರ ಬೆಳೆಯಲು ಕಷ್ಟವಾಗಲಿದೆ. ಜೇನುಗಳ ಸಮೂಹ ನಾಶ ಮಾಡಲು ನಮಗೆ ಯಾವ ಹಕ್ಕೂ ಇಲ್ಲ. ವನ್ಯಜೀವಿ ಕಾಯ್ದೆಯ ಪ್ರಕಾರ ಜೇನು ಹುಳಗಳಿಗೆ ರಕ್ಷಣೆ ನೀಡಬೇಕು. ಆದರೆ ಇವುಗಳ ಬಗ್ಗೆ ಅರಿವು ಇಲ್ಲದ ಅಧಿಕಾರಿಗಳು ಜೇನು ಗೂಡುಗಳನ್ನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.