ಇನ್ನಂಜೆ ಎಸ್.ವಿ.ಎಚ್. ಶಿಕ್ಷಣ ಸಂಸ್ಥೆಯಲ್ಲಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟಿಸಿ ಮಾತನಾಡಿದರು.

ಉಡುಪಿ: ಜೆನ್ ಝೀಗಳು ಇಂದು ಪ್ರತಿಭಾವಂತರಾಗಿದ್ದಾರೆ. ಆದರೆ ಅಪಾರ ಶಕ್ತಿ, ಉತ್ಸಾಹವನ್ನು ಹೊಂದಿರುವ ಈ ಯುವಜನತೆ ಯಶಸ್ವಿ ಜೀವನ ನಡೆಸಬೇಕಾದರೆ ಶ್ರಮಪಡುವುದು ಅಗತ್ಯ, ಅದಿಲ್ಲದೆ ಪ್ರತಿಫಲ ಸಿಗಲಾರದು ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಶ್ರೀಧರ್ ರಂಗನಾಥ ಪೈ ಹೇಳಿದರು.

ಇನ್ನಂಜೆ ಎಸ್.ವಿ.ಎಚ್. ಶಿಕ್ಷಣ ಸಂಸ್ಥೆಯಲ್ಲಿ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟಿಸಿ ಮಾತನಾಡಿದರು. ನಮ್ಮ ಬದುಕನ್ನು ನಾವು ಸರಿಯಾಗಿ ರೂಪಿಸಿಕೊಳ್ಳಬೇಕು, ನಮ್ಮ ಜೀವನ ಭತ್ತ ತುಂಬುವ ಚೀಲವಾಗಿರದೆ, ಭತ್ತವನ್ನು ಬೆಳೆಯುವ ಗದ್ದೆಯಾಗಬೇಕು. ಪ್ರಧಾನಮಂತ್ರಿಗಳ ವಿಕಸಿತ ಭಾರತದ ನವಸಂಕಲ್ಪವನ್ನು ಪೂರ್ಣ ಮನೋಭಾವದಿಂದ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸೋದೆ ಎಜ್ಯುಕೇಷನ್‌ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಐತಾಳ್ ಮುಖ್ಯ ಅತಿಥಿಯಾಗಿ ಆಗಮಿಸಿ, ಸಾಂಪ್ರದಾಯಿಕ ಶಿಕ್ಷಣದಲ್ಲಿ ಸಿಗಲಾರದ ಅನೇಕ ಹೊಸ ಸಂಗತಿಗಳನ್ನು ಈ ಶಿಬಿರಗಳಲ್ಲಿ ಕಲಿಯಲು ಸಾಧ್ಯ. ಸಹಬಾಳ್ವೆ, ಭ್ರಾತೃತ್ವ, ಸರ್ವಾಂಗೀಣ ಪ್ರಗತಿ ಎನ್‌ಎಸ್‌ಎಸ್ ಶಿಬಿರದ ಮೂಲಕ ಎಲ್ಲರಲ್ಲೂ ಮೂಡಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತ ಮಯ್ಯ ಅಧ್ಯಕ್ಷತೆ ವಹಿಸಿದರು. ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ್ ಪೈ, ಉದ್ಯಮಿ ನವೀನ್ ಅಮೀನ್, ಇನ್ನಂಜೆ ಗ್ರಾ.ಪಂ.ಅಧ್ಯಕ್ಷೆ ಮಾಲಿನಿ ಶೆಟ್ಟಿ, ಎಸ್.ವಿ.ಎಚ್. ಪಪೂ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ, ವಿದ್ಯಾರ್ಥಿ ನಾಯಕರಾದ ರಂಜಿತ್, ಧೃತಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಸುಚಿತ್ ಕೋಟ್ಯಾನ್ ಸ್ವಾಗತಿಸಿ ಅಧಿಕಾರಿ ಡಾ.ರೇಖಾ ಎನ್.ಚಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿನಿ ಮೇಘಾ ವಂದಿಸಿ, ರೋಶನಿ ನಿರೂಪಿಸಿದರು.