ಮಂಗಳೂರು : ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಸೆ.27ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಈ ಸಂಬಂಧ ಕೋರ್ಟ್ ಸಹಾಯಕ ಅಭಿಯೋಜಕರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ನೋಟಿಸ್ ಜಾರಿಗೊಳಿಸಿದೆ.
ಈ ಮಧ್ಯೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವ ತಿಮರೋಡಿ ಮನೆಗೆ ಮೂರನೇ ನೋಟಿಸ್ ಅಂಟಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಅವರು ನಾಪತ್ತೆಯಾದ ಕಾರಣ ಈಗಾಗಲೇ ವಿಚಾರಣೆಗೆ ಆಗಮಿಸುವಂತೆ ಸೂಚಿಸಿ ಪೊಲೀಸರು ಅವರ ಮನೆಗೆ ಎರಡು ಬಾರಿ ನೋಟಿಸ್ ಅಂಟಿಸಿ ಬಂದಿದ್ದರು. ಸೆ.25ರಂದು ಹಾಜರಾಗುವಂತೆ ಎರಡನೇ ನೋಟಿಸ್‌ನ್ನು ಅಂಟಿಸಲಾಗಿದ್ದರೂ, ಗುರುವಾರ ಅವರು ವಿಚಾರಣೆಗೆ ಆಗಮಿಸುವುದು ಅನುಮಾನ. ಹೀಗಾಗಿ, ಪೊಲೀಸರು ಗುರುವಾರ ಮತ್ತೆ ಮೂರನೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ರಾಯಚೂರಿಗೆ ಯಾಕೆ?:
ಈ ಮಧ್ಯೆ, ಸಾಮಾಜಿಕ ಶಾಂತಿಭಂಗಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಒಂದು ವರ್ಷ ಕಾಲ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಗೆ ಗಡಿಪಾರು ಮಾಡಲಾಗಿದೆ. ಗಡಿಪಾರು ಆದೇಶದಲ್ಲಿರುವ ಸಮಯದಲ್ಲಿ ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಈ ಆದೇಶದ ವಿರುದ್ಧ ತಿಮರೋಡಿಯವರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ಇದೇ ವೇಳೆ, ಪುತ್ತೂರಿನ ಸಹಾಯಕ ಕಮಿಷನರ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತಿಮರೋಡಿಗೆ ಗಡಿಪಾರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ತಿಮರೋಡಿಯವರು ಉಜಿರೆಯ ಮನೆಯಲ್ಲಿ ಇಲ್ಲದ ಕಾರಣ ಬೇರೆ ಕಡೆ ಪೊಲೀಸರು ತೆರಳಿದ್ದಾರೆ. ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಪೊಲೀಸ್ ತಂಡ ತೆರಳಿದ್ದು, ಈ ಕಡೆಗಳಲ್ಲಿ ತಿಮರೋಡಿ ತಲೆಮರೆಸಿರುವ ಶಂಕೆ ಪೊಲೀಸರದ್ದು.
ಸಾಮಾನ್ಯವಾಗಿ ಈ ರೀತಿ ಗಡೀಪಾರು ಮಾಡುವಾಗ ಪೊಲೀಸರು ವರದಿಯಲ್ಲಿ ನಾಲ್ಕು ಜಿಲ್ಲೆಗಳ ಹೆಸರನ್ನು ಸೂಚಿಸುತ್ತಾರೆ. ಮುಖ್ಯವಾಗಿ ಆ ಜಿಲ್ಲೆಗಳಲ್ಲಿ ಆರೋಪಿಯ ಇದುವರೆಗಿನ ಕೃತ್ಯಕ್ಕೆ ಪೂರಕವಾದ ಅಂಶಗಳು ಯಾವುದೂ ಇರಬಾರದು. ಅಲ್ಲಿ ಆತನ ಕೃತ್ಯ ಮುಂದುವರಿಯುವುದಕ್ಕೆ ಅವಕಾಶ ಇರಬಾರದು. ಮತ್ತು ಆ ಪ್ರದೇಶ ಸಾಕಷ್ಟು ದೂರ ಇರಬೇಕು. ಬೆಳ್ತಂಗಡಿಯಿಂದ ರಾಯಚೂರಿಗೆ ಸುಮಾರು 532 ಕಿ.ಮೀ. ದೂರ ಇದೆ. ಒಂದು ದಿನದಲ್ಲಿ ಬೆಳ್ತಂಗಡಿಗೆ ಬಂದು ಹೋಗುವುದು ಅಸಾಧ್ಯ. ಈ ಕಾರಣಕ್ಕೆ ರಾಯಚೂರಿಗೆ ಗಡೀಪಾರು ಮಾಡಲಾಗಿದೆ ಎಂದು ಹೇಳಲಾಗಿದೆ.
ತಿಮರೋಡಿ ಮಾನ್ವಿಗೆ ಬೇಡ,
ಕಾಡಿಗೆ ಕಳುಹಿಸಿ: ಪ್ರತಿಭಟನೆ
ರಾಯಚೂರು : ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರು, ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿರುವುದನ್ನು ವಿರೋಧಿಸಿ ದಲಿತ ಸೇನೆ ಮತ್ತು ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ ನಡೆಸಿದವು. ಅವರನ್ನು ಮಾನ್ವಿಗೆ ಬೇಡ ಕಾಡಿಗೆ ಕಳುಹಿಸಲು ಒತ್ತಾಯಿಸಿದವು.
ಡಾ। ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವೇದಿಕೆ ಮುಖಂಡರು ಗಡಿಪಾರು ತೀರ್ಮಾನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೇದಿಕೆ ಮುಖಂಡರು, ಧರ್ಮಸ್ಥಳ ಬುರುಡೆ ಗ್ಯಾಂಗಿನ ಮುಖ್ಯಸ್ಥ 32 ಕ್ರಿಮಿನಲ್ ಪ್ರಕರಣ ಹೊಂದಿದ್ದು, ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಆದೇಶ ಹೊರಡಿಸಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕ ಮತ್ತು ರಾಯಚೂರು ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯಿಂದ ನಾವು ಬಾಳುತ್ತಿದ್ದೇವೆ. ಇಂತಹ ಶಾಂತಿಯುತ ಜಿಲ್ಲೆಗೆ ಕ್ರಿಮಿನಲ್ ಆರೋಪದಡಿ ಮಹೇಶ್ ತಿಮರೋಡಿಯನ್ನು ದಯಮಾಡಿ ಕಳುಹಿಸಬೇಡಿ ಇಲ್ಲಿ ಶಾಂತಿ ಕದಡಬೇಡಿ. ಯಾವುದಾದರೂ ಕಾಡಿಗೆ ಕಳಿಸಿ ಎಂದು ಒತ್ತಾಯಿಸಿದರು.
ಹಣ ವಹಿವಾಟು: ತಿಮರೋಡಿ
ಪತ್ನಿ ಹೇಳಿಕೆ ಪಡೆದ ಎಸ್‌ಐಟಿ
ಮಂಗಳೂರು: ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬುಧವಾರ ಸಂಜೆ ಎಸ್ಐಟಿ ಅಧಿಕಾರಿಗಳು ಭೇಟಿ ನೀಡಿ, ತಿಮರೋಡಿ ಪತ್ನಿಯ ಹೇಳಿಕೆ ಪಡೆದುಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಮನೆಗೆ ಹೋಗಿದ್ದಾಗ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಆದರೆ, ತಿಮರೋಡಿ ಪತ್ನಿಯ ಬ್ಯಾಂಕ್ ಖಾತೆಯಿಂದ ಹಣದ ವಹಿವಾಟು ಪತ್ತೆಯಾದ ಹಿನ್ನೆಲೆಯಲ್ಲಿ ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.