ತಡರಾತ್ರಿ ಗುಡುಗು- ಸಿಡಿಲಬ್ಬರದ ಮಳೆ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ದ.ಕ.ದಲ್ಲಿ ಶನಿವಾರ ತಡರಾತ್ರಿ ಸಿಡಿಲಬ್ಬರದ ಮಳೆ
ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಜಿಲ್ಲೆಯ ಬಹುತೇಕ ಕಡೆ ಶನಿವಾರ ತಡರಾತ್ರಿ ಭಾರೀ ಗುಡುಗು ಮಿಂಚು ಸಿಡಿಲಬ್ಬರದಿಂದ ಕೂಡಿದ ಧಾರಾಕಾರ ಮಳೆಯಾಗಿದೆ. ಮಳೆಗಾಲ ಮುಗಿದ ಬಳಿಕ ದೊಡ್ಡ ಮಟ್ಟದ ಮಳೆ ಇದಾಗಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ದಿಢೀರನೆ ಮಳೆ ಕಾಣಿಸಿಕೊಂಡಿತ್ತು. ಅಲ್ಲದೆ, ಕಿವಿಗಡಚಿಕ್ಕುವ ಗುಡುಗಿನೊಂದಿಗೆ ಭಾರೀ ಮಳೆ ಸುರಿಯಿತು. ಸುಮಾರು ಒಂದೂವರೆ ಗಂಟೆ ಕಾಲ ಮಳೆ ಪ್ರತಾಪ ಕಾಣಿಸಿಕೊಂಡಿತ್ತು. ಭಾನುವಾರ ತೀವ್ರ ಬಿಸಿಲಿನ ಝಳ ಇದ್ದರೂ ಸಂಜೆ ವೇಳೆ ಮೋಡ ಕವಿದು ಹಲವೆಡೆ ಮಳೆ ಸುರಿದಿದೆ. ಮಂಗಳೂರಿನ ಕೆಲವು ಪ್ರದೇಶಗಳು, ಪುತ್ತೂರು, ಮೂಡುಬಿದಿರೆಯ ಕೆಲವು ಕಡೆ ಮಳೆಯಾಗಿದೆ. ಕೊಡಗು-ಹಾಸನ ಗಡಿ ಭಾಗದ ಕೊಡ್ಲಿಪೇಟೆಯಲ್ಲಿ ಭಾನುವಾರ ಅಪರಾಹ್ನ ಭಾರಿ ಮಳೆಯಾಯಿತು. ಕೊಡಗು ಜಿಲ್ಲಾದ್ಯಂತ ಭಾನುವಾರ ಮೋಡ ಕವಿದ ವಾತಾವರಣ ಇತ್ತು. ಪುತ್ತೂರು ತಾಲೂಕಿನಾದ್ಯಂತ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಮೋಡ ಕವಿದ ವಾತಾವರಣವಿತ್ತು. ಸುಮಾರು 5 ಗಂಟೆಯ ವೇಳೆಗೆ ಮಳೆ ಸುರಿಯಲಾರಂಭಸಿತು. ಸುಮಾರು 45 ನಿಮಿಷಗಳಷ್ಟು ಜೋರಾದ ಮಳೆ ಸುರಿದಿತ್ತು.

Share this article