ಪುತ್ತೂರು: ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ಸರಸ್ ಮೇಳದಂತಹ ಮೇಳಗಳು ಗ್ರಾಮೀಣಾಭಿವೃದ್ಧಿಗೆ ಸಹಕಾರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗದ ಸಂದರ್ಶನ ಎಂದರೆ ಅದು ಒಂದು ಕಲಿಕೆಯೇ ಆಗಿದೆ. ಒಮ್ಮೆ ಹಿನ್ನಡೆ ಆಯಿತು ಎಂದಾದರೆ ಬದುಕು ಅಲ್ಲಿಗೆ ಮುಗಿಯಿತು ಎಂದಲ್ಲ. ಸ್ಥಳೀಯ ಕೌಶಲ್ಯ ಹಾಗೂ ಪ್ರತಿಭೆಗಳನ್ನು ನಾವು ಬೆಳೆಸಿಕೊಳ್ಳಬೇಕು. ಉದ್ಯೋಗ ಹಾಗೂ ಇನ್ನಿತರ ಅವಕಾಶಗಳ ಬಗ್ಗೆ ನಾವು ಜಾಗೃತರಾಗಿ ಇತರರಿಗೆ ಆ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆದ್ಯತೆಯಾಗಬೇಕು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಉದ್ಯೋಗದ ಸಂದರ್ಶನದಲ್ಲಿ ಅನಗತ್ಯ ಭಯ ಬೇಡ. ಅನುಭವದ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಮಾತನಾಡಿ, ಗ್ರಾಮೀಣಾಭಿವೃದ್ಧಿ ಆಗಬೇಕೆಂದರೆ ವಿವಿಧ ಕಂಪೆನಿಗಳು ಹಳ್ಳಿಗಳತ್ತವೂ ಗಮನ ಹರಿಸಬೇಕು. ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ದೇಶಪ್ರೇಮ ಅವಶ್ಯ. ನಮ್ಮ ಬೆಳವಣಿಗೆಯಲ್ಲಿ ನಮ್ಮ ದೇಶದ ಪಾತ್ರವಿರುವಾಗ ನಾವೂ ದೇಶಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕು. ನಮ್ಮ ಪ್ರಯತ್ನ ನಿರಂತರವಾಗಿರಲಿ ಎಂದರು. ಉದ್ಯೋಗ ದೇಶದ ಅಭಿವೃದ್ಧಿಗೆ ಬುನಾದಿ ಹಾಕಿಕೊಡುತ್ತದೆ. ದೇಶದ ಉನ್ನತಿಗೆ ಯುವಜನರ ಪಾತ್ರ ದೊಡ್ಡದು ಎಂದು ವಿಧಾನ ಪರಿಷತ್ತಿನ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ನುಡಿದರು.
ಬೆಂಗಳೂರಿನ ರಾಷ್ಟ್ರೀಯ ಜೀವನೋಪಾಯ ಅಭಿಯಾನ(ಎನ್.ಆರ್.ಎಮ್.ಎಲ್) ದ ಉಪನಿರ್ದೇಶಕ ಜಗನ್ನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಇದ್ದರು.
ಪುತ್ತೂರು ಮತ್ತು ಕಡಬ ತಾಲೂಕು ಪಂಚಾಯಿತಿ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ವಂದಿಸಿದರು. ವಿವೇಕಾನಂದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ.ಎಸ್ ನಿರ್ವಹಿಸಿದರು. ಸುಮಾರು ೧೩೨ ಕಂಪನಿಗಳು ಉದ್ಯೋಗ ಮೇಳದಲ್ಲಿ ಬಾಗವಹಿಸಿದ್ದು ಸುಮಾರು ೨೫೦೦ ಸಾವಿರ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದರು.