ಬಡಾವಣೆ ಹೆಸರು ಬದಲಾವಣೆಗೆ ದಳ ಆಕ್ರೋಶ

KannadaprabhaNewsNetwork |  
Published : Aug 13, 2025, 12:30 AM IST
ಫೋಟೋ 12ಪಿವಿಡಿ1ಪಾವಗಡ,ಪಟ್ಟಣದ ಕುಮಾರಸ್ವಾಮಿ ಬಡಾವಣೆ ಮರುನಾಮಕರಣ ಕೈಬಿಡುವಂತೆ ಆಗ್ರಹಿಸಿ ತಾಲೂಕು ಜೆಡಿಎಸ್‌ನಿಂದ ಪುರಸಭೆ ಅವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.ಫೋಟೋ 12ಪಿವಿಡಿ2ಪಾವಗಡ,ವಿವಿಧ ಬೇಡಿಕೆಗೆ ತಾಲೂಕು ಜೆಡಿಎಸ್‌ನಿಂದ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಅಮ್‌ ಅದ್ಮಿ ಪಕ್ಷ ಜಿಲ್ಲಾ ಘಟಕದ ಎನ್‌.ರಾಮಾಂಜಿನಪ್ಪ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.  | Kannada Prabha

ಸಾರಾಂಶ

ಕುಮಾರಸ್ವಾಮಿ ಬಡಾವಣೆಯನ್ನು ಮರು ನಾಮಕರಣ ಮಾಡುವ ನಿರ್ಧಾರ ಹಾಗೂ ಇತರೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ತಾಲೂಕು ಜಾತ್ಯತೀತ ಜನತಾದಳ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಕುಮಾರಸ್ವಾಮಿ ಬಡಾವಣೆಯನ್ನು ಮರು ನಾಮಕರಣ ಮಾಡುವ ನಿರ್ಧಾರ ಹಾಗೂ ಇತರೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ತಾಲೂಕು ಜಾತ್ಯತೀತ ಜನತಾದಳ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಪುರಸಭೆ ಆವರಣದಲ್ಲಿ ಶಾಮಿಯಾನ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ಯುವ ನೇತಾರ, ತಾಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನೆರಳೇಕುಂಟೆ ಭರತ್‌ ಕುಮಾರ್‌ ಮಾತನಾಡಿ, ಪಟ್ಟಣದ ಕುಮಾರಸ್ವಾಮಿ ಬಡಾವಣೆಯನ್ನು ವೆಂಕಟರಮಣಪ್ಪ ಬಡಾವಣೆ ಎಂದು ಮರುನಾಮಕರಣಗೊಳಿಸುವುದು ರಾಜಕೀಯ ಷಡ್ಯಂತ್ರದ ಭಾಗ. ಕುಮಾರಸ್ವಾಮಿ ಬಡಾವಣೆಯನ್ನು ಯಾವುದೇ ಕಾರಣಕ್ಕೂ ಮರು ನಾಮಕರಣ ಮಾಡಲು ನಾವು ಬಿಡುವುದಿಲ್ಲ. ಬಡಾವಣೆಯ ಹೆಸರು ಬದಲಾವಣೆಗೆ ಹೊರಟ ನಿಮ್ಮ ಪುರಸಭೆ ಅಜೆಂಡಾ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಪುರಸಭೆ ಸದಸ್ಯ ಗುಟ್ಟಹಳ್ಳಿ ಮಣಿ, ಮಾತನಾಡಿ 2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಮೃತ ಹಸ್ತದಿಂದ ಪಟ್ಟಣದಲ್ಲಿರುವ ಕುಮಾರಸ್ವಾಮಿ ಬಡಾವಣೆಯನ್ನು ಉದ್ಘಾಟನೆ ಮಾಡಿ ಸುಮಾರು 400 ಮನೆಗಳನ್ನು ಮಂಜೂರು ಮಾಡಿದ್ದರು. ಅಂದಿನ ಶಾಸಕರಾಗಿದ್ದ ಕೆ.ಎಂ.ತಿ ಸದರಿ ಬಡಾವಣೆಗೆ ರಸ್ತೆ, ಚರಂಡಿ, ವಿದ್ಯುತ್, ನೀರು ಇತರೆ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟ ಬಗ್ಗೆ ದಾಖಲೆಗಳಿವೆ. ಅಲ್ಲಿನ ನಿವಾಸಿಗಳ ಆಧಾರ್ ಕಾರ್ಡ್, ಪಡಿತರ ಚೀಟಿ, ಶಾಲಾ ದಾಖಲಾತಿಗಳು,ಮನೆ ಖಾತೆ ಮತ್ತು ಆಧಾರ್,ಪಡಿತರ ಚೀಟಿಗಳಲ್ಲಿ ಕುಮಾರಸ್ವಾಮಿ ಬಡಾವಣೆ ಎಂದು ನಮೂದಿಸಲಾಗಿದೆ. ಸೇಡಿನ ರಾಜಕಾರಣದಿಂದ ಕುಮಾರಸ್ವಾಮಿ ಬಡಾವಣೆ ಹೆಸರನ್ನು ಮರುನಾಮಕರಣ ಮಾಡಲು ಮುಂದಾಗಿದ್ದು ವಿಪರ್ಯಾಸವೇ ಸರಿ ಎಂದು ಕಿಡಿಕಾರಿದರು

.ಧರಣಿಗೆ ತಾಲೂಕು ಅಮ್ ಆದ್ಮಿ ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು ಎಎಪಿ ಪ್ರಧಾನ ಕಾರ್ಯದರ್ಶಿ ಎನ್‌.ರಾಮಾಂಜಿನಪ್ಪ ಮಾತನಾಡಿ, ಕುಮಾರಸ್ವಾಮಿ ಬಡಾವಣೆಯ ಹೆಸರು ಬದಲಾಯಿಸಿ ವೆಂಕಟರಮಣಪ್ಪ ಬಡಾವಣೆಗೆ ಮುಂದಾಗಿರುವ ಪುರಸಭೆ ಕ್ರಮ ಸರಿಯಿಲ್ಲ. ಮರುನಾಮಕರಣದ ವಿಚಾರ ಕೈಬಿಡುವವರೆವಿಗೂ ಪುರಸಭೆಯ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಜೆಡಿಎಸ್‌ ರೈತ ಘಟಕದ ಅಧ್ಯಕ್ಷ ಕೆಂಚಗಾನಹಳ್ಳಿಯ ಗಂಗಾಧರ್‌ ನಾಯ್ಡ್ ಮಾತನಾಡಿ, ಇಲ್ಲಿನ ಕಾಂಗ್ರೆಸ್‌ ಪಕ್ಷ, ಸ್ವಾರ್ಥ ರಾಜಕಾರಣದಲ್ಲಿ ಮುಳಗಿದ್ದು, ಬಡಾವಣೆಯ ಹೆಸರು ಬದಲಾವಣೆಗೆ ಮುಂದಾಗಿದ್ದು ಖಂಡನೀಯ. ಕುಡಿಯುವ ನೀರು ಪೂರೈಕೆಗೆ ಅಮೃತ್‌ ಯೋಜನೆ ಅಡಿ ರಸ್ತೆ ಬಗೆದ ಪರಿಣಾಮ ನಗರದ 23 ವಾರ್ಡ್‌ಗಳಲ್ಲಿ ರಸ್ತೆ ಹಾಳಾಗಿದೆ. ರಸ್ತೆಯನ್ನು ಸರಿಪಡಿಸುವಲ್ಲಿ ಮೀನಮೇಷ ಹಾಕುತ್ತಿರುವುದು ದುರಂತ. 5 ವರ್ಷಗಳಿಂದ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕೊಟ್ಟಿರುವುದಿಲ್ಲ.ಆದರೆ ಪುರಸಭೆ ವತಿಯಿಂದ ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡುವುದು ನಿಲ್ಲಿಸಬೇಕು ಎಂದರು.

ಯುವ ಮುಖಂಡ ಕಾವಲಗೆರೆ ರಾಮಾಂಜಿನಪ್ಪ ಹಾಗೂ ಮಾಜಿ ತಾಪಂ ಅಧ್ಯಕ್ಷ ಹುಸೇನ್‌ಪುರದ ರಾಜ್‌ ಗೋಪಾಲ್‌ ಪುರಸಭೆ ವೈಖರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಎನ್‌.ಎ.ಈರಣ್ಣ, ಸ್ಥಳೀಯ ಜೆಡಿಎಸ್‌ ಮುಖಂಡರಾದ ಎನ್.ತಿಮ್ಮಾರೆಡ್ಡಿ, ರಾಜಶೇಖರಪ್ಪ, ಗೋವಿಂದಬಾಬು, ಕೋಟಗುಡ್ಡ ಅಂಜಿನಪ್ಪ, ಬಿ.ಹೊಸಹಳ್ಳಿಯ ಅಂಜನಾ ನಾಯಕ, ರಾಮಾಂಜಿನರೆಡ್ಡಿ, ಮಂಜುನಾಥ ಚೌದರಿ, ಕಾಂತಪ್ಪ, ಮಲ್ಲಿಕಾರ್ಜುನ ಇತರರಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್