ದಲಿತ, ಹಿಂದೂ ವಿರೋಧಿ, ಯಡವಟ್ಟು ಸರ್ಕಾರ: ಬಿಜೆಪಿ ಟೀಕೆ

KannadaprabhaNewsNetwork | Published : Feb 24, 2024 2:35 AM

ಸಾರಾಂಶ

ರಾಜ್ಯ ಸರ್ಕಾರ ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ದಲಿತ ವಿರೋಧಿ, ಜನವಿರೋಧಿ ಮತ್ತು ಯಡವಟ್ಟು ಸರ್ಕಾರ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಸರ್ಕಾರ ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ದಲಿತ ವಿರೋಧಿ, ಜನವಿರೋಧಿ ಮತ್ತು ಯಡವಟ್ಟು ಸರ್ಕಾರ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾಧ್ಯಕ್ಷ ಸಿ,ಎಸ್. ನಿರಂಜನಕುಮಾರ್, ಮಾಜಿ ಶಾಸಕ ಎಸ್. ಬಾಲರಾಜು, ಮುಖಂಡರಾದ ಎಂ. ರಾಮಚಂದ್ರ, ಅರಕಲವಾಡಿ ನಾಗೇಂದ್ರ ರಾಜ್ಯ ಕಾಂಗ್ರೆಸ್ ದಲಿತ ವಿರೋಧಿ ಮತ್ತು ಯಡವಟ್ಟುಗಳ ಸರ್ಕಾರ ಎಂದು ಟೀಕಿಸಿದರು. ರಾಜ್ಯದಲ್ಲಿ ಎಸ್‌ಇಪಿ, ಟಿಎಸ್‌ಪಿ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡರೆ ಶಿಕ್ಷೆ ಕೊಡುವ ಕಾನೂನು ತಂದ ಸಿಎಂ ಸಿದ್ದರಾಮಯ್ಯ ಈಗ ೧೧,೧೪೪ ಕೋಟಿ ರು. ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ದಲಿತ ವಿರೋಧಿ ಸರ್ಕಾರ ಮುಂದೆ ೧೪ ಸಾವಿರ ಕೋಟಿ ಹಣವನ್ನು ತೆಗೆದುಕೊಳ್ಳುವ ಹುನ್ನಾರ ಮಾಡಿದ್ದಾರೆ ಎಂದರು.ಸರ್ಕಾರವು ೫ ಗ್ಯಾರಂಟಿಗಳನ್ನು ಕೊಡುವ ಮೂಲಕ ರಾಜ್ಯದ ಬಡ ಜನರ ಮೂಲ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುವ ಹಣವನ್ನು ಎಲ್ಲಿಂದ ತಂದು ಕೊಡುತ್ತೀರ ಎಂದು ಪ್ರಶ್ನಿಸಿದ ಅವರು, ಸರ್ಕಾರ ಹಣ ಸಂಗ್ರಹಿಸಿ ತಂದು ಕೊಡುತ್ತಿಲ್ಲ. ಬದಲಿಗೆ ಸಾಲ ಮಾಡಿ ತಂದು ಕೊಡುತ್ತಿದ್ದಾರೆ. ಒಟ್ಟು ೬. ೬೫ ಲಕ್ಷ ಕೋಟಿ ಸಾಲ ಮಾಡಿದ್ದು ವರ್ಷಕ್ಕೆ ರಾಜ್ಯದ ಪ್ರತಿಯೊಬ್ಬರ ಮೇಲೆ ೯೫ ಸಾವಿರ ಸಾಲವಿದೆ ಎಂದರು.

ದಲಿತರು, ಹಿಂದುಳಿದವರು, ಬಡವರ ಪರ ಅಂತ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ. ಅನುದಾನ ದುರ್ಬಳಕೆ ಮೂಲಕ ದಲಿತರ ವಿರೋಧಿಯಾಗಿದ್ದು ಬಿಟ್ಟಿ ಭಾಗ್ಯಗಳ ಮೂಲಕ ಜನರಿಗೆ ವಂಚನೆ ಮಾಡಲಾಗುತ್ತಿದೆ. ಅನೇಕ ಯೋಜನೆಗಳನ್ನು ಕೊಟ್ಟಿದ್ದು ಅದು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ೧೦ ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದ್ದ ಸರ್ಕಾರ, ಕೇಂದ್ರ ಸರ್ಕಾರ ಕೊಡುವ ೫ ಕೆಜಿ ಅಕ್ಕಿ ಮಾತ್ರ ನೀಡಿ ಉಳಿದ ೫ ಕೆಜಿ ಅಕ್ಕಿ ಕೊಡುವುದಕ್ಕೆ ಆಗಿಲ್ಲ. ಅಕ್ಕಿ ಬದಲು ಹಣವನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ದೂರಿದರು.

ಸುಳ್ಳು ಮಾತುಗಳನ್ನು ಹೇಳಿ ಜನರನ್ನು ವಂಚನೆ ಮಾಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆ ಶೇ.೪೦ ಜನರಿಗೆ ಮಾತ್ರ ತಲುಪಿದೆ. ದಲಿತರ ಹಣ ತೆಗೆದು ಗ್ಯಾರಂಟಿಗಳಿಗೆ ಹಂಚುವ ಮೂಲಕ ದಲಿತರಿಗೆ ದ್ರೋಹ ಮಾಡಲಾಗಿದೆ ಎಂದರು.

ಈ ಪ್ರತಿಭಟನೆಯಲ್ಲಿ ಪ್ರದಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮಹದೇವಸ್ವಾಮಿ ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ಮುಖಂಡರಾದ ಜಯಸುಂದರ್, ಎನ್‌ರಿಚ್ ಮಹದೇವಸ್ವಾಮಿ, ಪುಟ್ಟಮಲ್ಲಪ್ಪ, ವಿರಾಟ್ ಶಿವು, ಶಿವರಾಜ್, ಆಶಾ, ನಟರಾಜ್, ಸೂರ್ಯ, ಚಂದ್ರಶೇಖರ್, ಸರಸ್ವತಮ್ಮ ಇತರರು ಭಾಗವಹಿಸಿದ್ದರು.

Share this article