ದಲಿತ ಮಿತ್ರ ಮಂಡಳಿಯ ಅಧ್ಯಕ್ಷ ಕುಮಾರ ನಡಗೇರಿ, ಜು. 23ರಂದು ಕನಕವಾಡ ಗ್ರಾಮದ ದಾದೇಗೌಡ ಪಾಟೀಲ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಂಗಡಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಗದಗ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ತಕ್ಷಣವೇ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಮಿತ್ರ ಮಂಡಳಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮಿತ್ರ ಮಂಡಳಿಯ ಅಧ್ಯಕ್ಷ ಕುಮಾರ ನಡಗೇರಿ, ಜು. 23ರಂದು ಕನಕವಾಡ ಗ್ರಾಮದ ದಾದೇಗೌಡ ಪಾಟೀಲ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಸಂಗಡಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಹಲ್ಲೆಯಿಂದ ಎದೆ ಹಾಗೂ ತುಟಿಗೆ ತೀವ್ರ ಗಾಯಗೊಂಡಿರುವ ದಾದೇಗೌಡ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಅಧಿಕಾರಿಯ ವಿರುದ್ಧ ಈ ಹಿಂದೆಯೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಆರೋಪಗಳಿದ್ದು, ಲಕ್ಷ್ಮೇಶ್ವರದಲ್ಲಿದ್ದಾಗ ನವರಾತ್ರಿ ಮೂರ್ತಿ ವಿಸರ್ಜನೆ ನಂತರ ಗೋಸಾವಿ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಪ್ರತಿಭಟನೆ ನಡೆದು ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಒಂದು ವರ್ಷದ ಹಿಂದೆ ಸೋಮಪ್ಪ ಲಮಾಣಿ ಎಂಬ ರೈತನ ಮೇಲೂ ಹಲ್ಲೆ ನಡೆಸಿ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ್ದರು ಎಂದು ಆರೋಪಿಸಿದರು. 10 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಧರಣಿ, ಅಹೋರಾತ್ರಿ, ಸರದಿ ಹಾಗೂ ಅಮರಣಾಂತಿಕ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು, ಈ ಕುರಿತು ಎಸ್‌ಪಿ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಪಿ.ಎಸ್. ಕಾಳೆ, ಹಿರಿಯ ಮುಖಂಡ ಹುಲಿಗೆಪ್ಪ ವಾಲ್ಮೀಕಿ, ಸದಾನಂದಸಿಂಗ್ ಗುರ್ಲಹೊಸೂರ, ಮಂಜುನಾಥ ಯಮುನಾಳ, ಶಿವು ಬಂಗಾರಿ, ಆನಂದ ಅರಿಕೇರಿ, ಸಂತೋಷ ರಸಾಳಕರ, ಸ್ವರೂಪ ಉಳ್ಳಿಕಾಶಿ ಹಾಗೂ ರಮೇಶ ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.