ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿ ಎದುರು ಸೇರಿದ ಪದಾಧಿಕಾರಿಗಳು ಹಾಗೂ ಮುಖಂಡರು ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಮು, ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿವ ಮುನಿರತ್ನರವರು ಪರಿಶಿಷ್ಟ ಜಾತಿ ಮತ್ತು ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿರುವುದನ್ನು ಖಂಡಿಸಿದರು.ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹನಿಟ್ರ‍್ಯಾಪ್ ಮಾಡಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಇಂತಹ ಘಟನೆಗಳಿಂದ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಕೂಡಲೇ ಮುನಿರತ್ನರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಬಿಎಸ್‌ಪಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಜನಪ್ರತಿನಿಧಿಯಾಗಿರುವ ಮುನಿರತ್ನ ದಲಿತ ಜನಾಂಗದ ಬಗ್ಗೆ ಜಾತಿ ನಿಂದನೆ ಮಾಡಿ ಮಹಿಳೆಯರ ಬಗ್ಗೆ ಅವಾಚ್ಯ ಪದ ಪ್ರಯೋಗ ಮಾಡಿರುವುದು ಸಮಾಜವೇ ತಲೆ ತಗ್ಗಿಸುವಂತಾಗಿದೆ. ನೀಚ ಮನಸ್ಥಿತಿಯುಳ್ಳವರು ಶಾಸಕನಾಗಿ ಮುಂದುವರೆಯಲು ಅನರ್ಹರಾಗಿದ್ದು, ರಾಜ್ಯಪಾಲರು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.