ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಆಗ್ರಹ

KannadaprabhaNewsNetwork |  
Published : Jul 03, 2024, 12:16 AM IST
2ಮಾಗಡಿ3 : ಮಾಗಡಿ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಹೊರಗುತ್ತಿಗೆ ನೇಮಕಾತಿಯಲ್ಲಿ ಸೇವಾ ಭದ್ರತೆ ನೀಡಬೇಕು. ಪ್ರತಿ ಹೊರಗುತ್ತಿಗೆ ನೌಕರ ಪಟ್ಟಿ ಸಿದ್ಧಗೊಳಿಸಿ ಜಾರಿಗೊಳಿಸಬೇಕು, ಪ.ಜಾತಿ-ಪ.ಪಂಗಡದ ರೋಷ್ಟರ್ ಪ್ರಕಾರ ಮೀಸಲಾತಿ ನೀಡಬೇಕು. ಹೊರಗುತ್ತಿಗೆ ನೌಕರನ್ನು ಕಾಯಂ ಮಾಡಬೇಕು, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಲಿ ಇರುವ ಸರ್ಕಾರದ ಹುದ್ದೆಗಳನ್ನು ತುಂಬಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಹೊರ ಗುತ್ತಿಗೆಯಲ್ಲಿ ಮೀಸಲಾತಿ ಸರ್ಕಾರದ ಆದೇಶ ವೈಜ್ಞಾನಿಕವಾಗಿ ಜಾರಿಯಾಗಲಿ, ಹೊರ ಗುತ್ತಿಗೆಯ ಎಲ್ಲಾ ನೌಕರರಿಗೆ ಸೇವಾ ಭದ್ರತೆ ನೀಡಿ, ಅವರನ್ನು ಕಾಯಂ ಮಾಡಲು ಹಾಗೂ ಇತರ ಬೇಡಿಕೆಗಳನ್ನು ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿ (ಡಿ.ಎಚ್.ಎಸ್) ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ದಲಿತ ಹಕ್ಕುಗಳ (ಡಿಎಚ್ಎಸ್) ಸಮಿತಿ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರಾಜ್ಯಾದ್ಯಂತ ಡಿಎಚ್ಎಸ್ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಹೊರಗುತ್ತಿಗೆಯಲ್ಲಿ ಮೀಸಲಾತಿ ನೀಡುವ ನಿರ್ಧಾರವನ್ನು ಕರ್ನಾಟಕ ದಲಿತ ಹಕ್ಕುಗಳ ಸಮಿತಿಯು ಸ್ವಾಗತಿಸುತ್ತದೆ. ಆದರೆ, ಬಲಗೈಗೆ ಕೊಟ್ಟು ಎಡಗೈಯಿಂದ ಕಿತ್ತುಕೊಳ್ಳುವ ಮಾರ್ಗಸೂಚಿ ಈ ಆದೇಶದಲ್ಲಿದ್ದು, ದಲಿತರ ಮೂಗಿಗೆ ತುಪ್ಪ ಸವರಿದಂತಾಗಿದೆ. ಸರ್ಕಾರ ಈ ಆದೇಶವನ್ನು ಪುನರ್ ಚಿಂತನೆ ಮಾಡಬೇಕಿದೆ. ಆದೇಶದಲ್ಲಿ 20 ಹುದ್ದೆಗಳು ನೇಮಕವಾಗಿರುವ ಕಡೆ ಮಾತ್ರ ಮಿಸಲಾತಿ ಜಾರಿ ಎಂದು ಹೇಳಿರುವುದು ಅವೈಜ್ಞಾನಿಕವಾಗಿದೆ. 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಹೊರಗುತ್ತಿಗೆ ನೇಮಕಾತಿಯಲ್ಲಿ ಸೇವಾ ಭದ್ರತೆ ನೀಡಬೇಕು. ಪ್ರತಿ ಹೊರಗುತ್ತಿಗೆ ನೌಕರ ಪಟ್ಟಿ ಸಿದ್ಧಗೊಳಿಸಿ ಜಾರಿಗೊಳಿಸಬೇಕು, ಪ.ಜಾತಿ-ಪ.ಪಂಗಡದ ರೋಷ್ಟರ್ ಪ್ರಕಾರ ಮೀಸಲಾತಿ ನೀಡಬೇಕು. ಹೊರಗುತ್ತಿಗೆ ನೌಕರನ್ನು ಕಾಯಂ ಮಾಡಬೇಕು, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಲಿ ಇರುವ ಸರ್ಕಾರದ ಹುದ್ದೆಗಳನ್ನು ತುಂಬಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕು ಉಪಾಧ್ಯಕ್ಷ ಹನುಮಂತರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಮರು ಚಿಂತನೆ ಮಾಡಿ ಜನ ವಿರೋಧಿ ನೀತಿಯನ್ನು ಹಿಂಪಡಿಯಬೇಕು. ತಾಲೂಕಿನ ನಾಗಶೆಟ್ಟಿಹಳ್ಳಿಯಲ್ಲಿ ಸರ್ಕಾರ1978-79ರಲ್ಲಿ ದೇವಸ್ಥಾನದ ಮಂಡಳಿಗೆ ಮಾಡಿರುವ ಖಾತೆ ರದ್ದುಗೊಳಿಸಿ, ಹಕ್ಕುದಾರ ದಲಿತರಿಗೆ ಭೂಮಿ ವರ್ಗಾಯಿಸಿ, ದಲಿತರ ಮೇಲೆ ವಿನಾಕಾರಣ ಹಾಕಿರುವ ಕೇಸುಗಳನ್ನು ವಜಾಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಹಿಂದೆ ನೀಡಿದ್ದ ದಲಿತರ ಖಾಲಿ ನಿವೇಶನಗಳನ್ನು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಆದೇಶದನುಸಾರ ತಗ್ಗಿಕುಪ್ಪೆ ಪಂಚಾಯಿತಿಗೆ ಖಾತೆ ಮಾಡಲು ಸೂಚಿಸಬೇಕು. ಹಾಗೆಯೇ ಗುಂಡಿಗೆರೆ, ಗೊಲ್ಲಹಳ್ಳಿ, ದುಬಗಟ್ಟ, ನಾಗಶೆಟ್ಟಹಳ್ಳಿ, ಮಲ್ಲಿಗುಂಟೆ, ಹೊಸಹಳ್ಳಿಯಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಮತ್ತು ಮಂಜೂರಾತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಚಿಕ್ಕ ಹನುಮಂತರಾಜು, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಚನ್ನಪ್ಪಾಜಿ, ಕಾರ್ಯದರ್ಶಿ ಶಿವರಾಜು, ಅಂಕಪ್ಪ, ನಾಗರಾಜಯ್ಯ, ದೇವರಾಜು, ಮಾರೇಗೌಡ ಸೇರಿ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ