ಅಂಬೇಡ್ಕರ್‌ ನಗರದ 90 ಮನೆಗಳಿಗೆ ಹಕ್ಕುಪತ್ರ ನೀಡಲು ದಲಿತ ಸಂಘರ್ಷ ಸಮಿತಿ ಆಗ್ರಹ

KannadaprabhaNewsNetwork | Published : Oct 16, 2024 12:46 AM

ಸಾರಾಂಶ

ನರಸಿಂಹರಾಜಪುರ, ಪಟ್ಟಣದ 7ನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ 90 ದಲಿತ ಕುಟುಂಬಗಳಿಗೆ ಈವರೆಗೂ ಹಕ್ಕು ಪತ್ರ ಸಿಕ್ಕಿಲ್ಲ. ಸಂಬಂಧ ಪಟ್ಟವರು ಹಕ್ಕು ಪತ್ರ ನೀಡುವಂತೆ ಎಂದು ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಡಿ ರಾಮು ಹಾಗೂ ತಾಲೂಕು ಸಂಚಾಲಕಿ ಪವಿತ್ರ ಆಗ್ರಹಿಸಿದರು.

ಡಿಎಸ್‌ಎಸ್‌ ಸಭೆಯಲ್ಲಿ ಚರ್ಚೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ 7ನೇ ವಾರ್ಡಿನ ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ 90 ದಲಿತ ಕುಟುಂಬಗಳಿಗೆ ಈವರೆಗೂ ಹಕ್ಕು ಪತ್ರ ಸಿಕ್ಕಿಲ್ಲ. ಸಂಬಂಧ ಪಟ್ಟವರು ಹಕ್ಕು ಪತ್ರ ನೀಡುವಂತೆ ಎಂದು ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಡಿ ರಾಮು ಹಾಗೂ ತಾಲೂಕು ಸಂಚಾಲಕಿ ಪವಿತ್ರ ಆಗ್ರಹಿಸಿದರು.

ಪ್ರವಾಸಿ ಮಂದಿರದಲ್ಲಿ ಡಿಎಸ್‌ಎಸ್‌ ಸಭೆಯಲ್ಲಿ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನಾದಿ ಕಾಲದಿಂದಲೂ ಅಂಬೇಡ್ಕರ್ ನಗರದಲ್ಲಿ 90 ಕುಟುಂಬಗಳು ವಾಸಮಾಡುತ್ತಿದ್ದಾರೆ. ಮಳೆಗಾಲದಲ್ಲಿ ವರ್ಷಕ್ಕೆ 3-4 ಮನೆಗಳು ಉರುಳಿ ಬೀಳುತ್ತಿವೆ. ಈ ಹಿಂದೆ ಗೋಡೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಕ್ಕು ಪತ್ರ ಇಲ್ಲದೆ ಇರುವುದರಿಂದ ಬ್ಯಾಂಕಿನನಿಂದ ಸಾಲ ಮಾಡಿ ಮನೆ ಕಟ್ಟಿಕೊಳ್ಳಲು ಸಾದ್ಯವಾಗುತ್ತಿಲ್ಲ. ಪಟ್ಟಣ ಪಂಚಾಯಿತಿಯಿಂದಲೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ತಕ್ಷಣ ಪಟ್ಟಣ ಪಂಚಾಯಿತಿ 7 ನೇ ವಾರ್ಡಿನ ಮನೆಗಳಿಗೆ ಹಕ್ಕುಪತ್ರ ನೀಡಬೇಕು. ಇದರ ಜೊತೆಗೆ ಪಟ್ಟಣದ 4 ನೇ ವಾರ್ಡಿನಲ್ಲೂ ಕೆಲವರಿಗೆ ಹಕ್ಕು ಸಿಕ್ಕಿಲ್ಲ. ಅವರಿಗೂ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಸೂಸಲವಾನಿ ಗ್ರಾಮದಲ್ಲಿ 100 ಕುಟುಂಬಗಳಿಗೆ 2013 ರಲ್ಲಿ ತಹದೀಲ್ದಾರ್‌ ಜಾತಿ ಪ್ರಮಾಣ ಪತ್ರ ವಜಾ ಮಾಡಿದ್ದಾರೆ. ಎಸ್‌ ಸಿ ಹಾಗೂ ಎಸ್‌ ಟಿ ಕುಂದು ಕೊರತೆ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಆದ್ದರಿಂದ ಸಂಭಂದಪಟ್ಟವರು ಗಮನ ಹರಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.ತಾಲೂಕಿನ 14 ಗ್ರಾಪಂ ಗಳಲ್ಲೂ ಎಸ್‌ ಸಿ ಹಾಗೂ ಎಸ್‌ ಟಿ ಸಮುದಾಯವರು ಮನೆ ಕಟ್ಟಿ ಕೊಂಡು ವಾಸವಾಗಿದ್ದಾರೆ. ಅವರು 94 ಸಿ ಅಡಿಯಲ್ಲಿ ಅರ್ಜಿ ಹಾಕಿದ್ದಾರೆ. ಈ ವರೆಗೂ ಹಕ್ಕು ಪತ್ರ ನೀಡಿಲ್ಲ.ಆ ಕುಟುಂಬದವರಿಗೆ ಹಕ್ಕು ಪತ್ರ ನೀಡಬೇಕು. ಹಕ್ಕು ಪತ್ರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಎಸ್‌ ಎಸ್ ಮುಖಂಡರಾದ ಲತಾ, ಶ್ರೀನಾಥ, ವಿಮಲ, ಜಾರ್ಜ್‌, ಶ್ರೀಕಾಂತ್‌, ಸುಧಾಕರ, ಸುಜಿತ್‌, ಚಂದ್ರಶೇಖರ್‌, ರಾಗಿಣಿ, ಸಿಜು, ಪಾರ್ವತಿ,ಲಕ್ಷ್ಮಿ,ಮೀನಾಕ್ಷಿ ಮತ್ತಿತರರು ಇದ್ದರು.

Share this article