ಇಡ್ಲಿ ಕೊಡಿಸದಿದ್ದಕ್ಕೆ ಪಾನಮತ್ತ ಪೊಲೀಸರಿಂದ ದಲಿತ ಯುವಕರ ಮೇಲೆ ಹಲ್ಲೆ

KannadaprabhaNewsNetwork | Published : Mar 5, 2025 12:35 AM

ಸಾರಾಂಶ

ಇಡ್ಲಿ ಕೊಡಿಸಲು ಹಣವಿಲ್ಲ ಎಂದಿದ್ದಕ್ಕೆ ಇಬ್ಬರು ದಲಿತ ಯುವಕರ ಮೇಲೆ ಪಾನಮತ್ತರಾಗಿದ್ದ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿ ಗುಂಡಾಗಿರಿ ನಡೆಸಿರುವ ಆರೋಪದ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಇಡ್ಲಿ ಕೊಡಿಸಲು ಹಣವಿಲ್ಲ ಎಂದಿದ್ದಕ್ಕೆ ಇಬ್ಬರು ದಲಿತ ಯುವಕರ ಮೇಲೆ ಪಾನಮತ್ತರಾಗಿದ್ದ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿ ಗುಂಡಾಗಿರಿ ನಡೆಸಿರುವ ಆರೋಪದ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕುರುಪೇಟೆಯ ಎಕೆ ಕಾಲೋನಿ ನಿವಾಸಿ ರಾಕೇಶ್ ಇವರ ಸಹೋದರ ಜಗದೀಶ್ ಹಲ್ಲೆಗೊಳಗಾದ ಯುವಕರು. ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಬಸಪ್ಪ ಎಎಸ್‌ಐ ಪದ್ಮಶಂಕರ್ ಹಾಗೂ ಇತರೆ ಮೂರು ಜನರ ಮೇಲೆ ಹಲ್ಲೆಗೊಳಗಾದ ರಾಕೇಶ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸೋಮವಾರ ರಾತ್ರಿ ನಗರದ ತಾಲೂಕು ಕಚೇರಿ ಪಕ್ಕದಲ್ಲಿರುವ ತಳ್ಳುವ ಗಾಡಿ ಶ್ರೀನಿವಾಸ್ ಕ್ಯಾಂಟೀನ್‌ನಲ್ಲಿ ಕುರುಪೇಟೆ ಎಕೆ ಕಾಲೋನಿ ನಿವಾಸಿ ರಾಕೇಶ್ ಹಾಗೂ ಜಗದೀಶ್ ಇಬ್ಬರು ಇಡ್ಲಿ ತಿನ್ನುತ್ತಿದ್ದ ವೇಳೆ ಪಾನಮತ್ತರಾಗಿ ಬಂದಿದ್ದ ನಾಲ್ವರು ಪೊಲೀಸರು ನಮಗೂ ನಾಲ್ಕು ಪ್ಲೇಟ್ ಇಡ್ಲಿ ಕೊಡಿಸಿ ಎಂದು ಕೇಳಿದ್ದಾರೆ. ನಮ್ಮ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದಕ್ಕೆ ಇಷ್ಟು ದೊಡ್ಡ ಗಾಡಿ ತಂದಿದ್ದಿರಿ ಇಡ್ಲಿ ಕೊಡಿಸಲು ಹಣವಿಲ್ಲವೇ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಬಸಪ್ಪ ಹಾಗೂ ಮೂವರು ಸಿಬ್ಬಂದಿಗಳು ಸಾರ್ವಜನಿಕವಾಗಿ ಲಾಠಿಯಿಂದ ನಮ್ಮ ಮೇಲೆ ಹಲ್ಲೆ ಮಾಡಿದರು ಅದನ್ನು ತಡೆ ಯಲು ಬಂದ ನನ್ನ ಸಹೋದರ ಜಗದೀಶ್ ಮೇಲೂ ಹಲ್ಲೆ ನಡೆಸುವ ಮೂಲಕ ಪೊಲೀಸ್ ರು ದೌರ್ಜನ್ಯ ಗೂಂಡಾಗಿರಿ ನಡೆಸಿದ್ದು ನಮ್ಮ ಬಟ್ಟೆಗಳನ್ನು ಹರಿದು ಹಾಕಿ ತಾಲೂಕು ಕಚೇರಿಯಿಂದ ಪೊಲೀಸ್ ಠಾಣೆಯವರೆಗೂ ಅರೆಬೆತ್ತಲೆಯಾಗಿ ಅಕ್ರಮ ಮೆರವಣಿಗೆ ಮಾಡಿ ದಾರಿ ಯುವುದಕ್ಕೂ ಲಾಟಿ ಬೂಟುಗಳಿಂದ ಮನಸ್ಸು ಇಚ್ಛೆ ಅಮಾನವೀಯ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಸೋಮವಾರ ರಾತ್ರಿ 10:30ರ ಸಮಯದಲ್ಲಿ ನಗರ ಠಾಣೆಗೆ ಕರೆತಂದು ಠಾಣೆಯ ಲಾಕಪ್‌ನಲ್ಲಿ ಬಲವಂತವಾಗಿ ವಿವಸ್ತ್ರಗೊಳಿಸಿ ಕೂರಿಸಿದ್ದಾರೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪದ್ಮ ಶಂಕರ್ ಎಂಬ ಎಎಸ್‌ಐ ಲಾಟಿ ಹಾಗೂ ಬೂಟು ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದು ಸರ್ಕಾರ ಕೊಟ್ಟಿದ್ದ ಅಧಿಕಾರ ಮತ್ತು ಕರ್ತವ್ಯದ ಹೊಣೆ ಗಾರಿಕೆಯನ್ನು ಗಾಳಿಗೆ ತೂರಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಮೂಲಕ ನನಗೆ ಕಿರುಕುಳ ನೀಡಿದ್ದು ಅಗತ್ಯಕ್ಕಿಂತಲೂ ಹೆಚ್ಚಿನ ಬಲಪ್ರಯೋಗ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ದುಷ್ಕೃತ್ಯ ನಡೆಸಿರುವ ಪೊಲೀಸ್ ಪೇದೆ ಬಸಪ್ಪ ಹಾಗೂ ಇತರೆ ಮೂರು ಜನ ಸಿಬ್ಬಂದಿ ಮತ್ತು ಎಎಸ್‌ಐ ಪದ್ಮಶಂಕರ್ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಮತ್ತು ರಕ್ಷಣೆ ಕೊಡಬೇಕು ಎಂದು ಹಲ್ಲೆಗೊಳಗಾದ ರಾಕೇಶ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ: ಪೊಲೀಸರ ವರ್ತನೆಗೆ ಸಾರ್ವಜನಿಕ ವಲಯದಲ್ಲೂ ಬಾರಿ ಆಕ್ರೋಶ ವ್ಯಕ್ತವಾಗಿದೆ. ಇಡ್ಲಿ ಕೊಡಸಲಿಲ್ಲ ಎಂಬ ಕಾರಣಕ್ಕೆ ದಲಿತ ಯುವಕರ ಮೇಲೆ ಪಾನಮತ್ತರಾಗಿ ಪೊಲೀಸ್ ಸಿಬ್ಬಂದಿಗಳು ಮನಸ್ಸೋ ಇಚ್ಚೆ ಹಲ್ಲೆ ನಡೆಸಿ ರುವ ದೃಶ್ಯವನ್ನು ಕೆಲವರು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತ ವಾಗಿದೆ.

ಜನರಿಗೆ ರಕ್ಷಣೆ ಕೊಟ್ಟು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಆರಕ್ಷಕರೆ ಇಡ್ಲಿ ಕೊಡಿಸದಿದ್ದಕ್ಕೆ ದಲಿತ ಯುವಕರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ನಡೆಸಿ ರುವುದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಂಡು ಇಂತಹ ಘಟನೆ ಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಘಟನೆ ವಿಡಿಯೋ ನೋಡಿದ್ದೆನೆ, ದೂರು ಆದರಿಸಿ ಅಥವಾ ದೂರು ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಆರಿಸಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.-ಶ್ರೀನಿವಾಸ್‌ಗೌಡ, ಎಸ್‌ಪಿ

Share this article