ಬಳ್ಳಾರಿ: ದಲಿತ ಚಳವಳಿಯ ಇತಿಹಾಸ ಹಾಗೂ ಸಾಮಾಜಿಕ ನ್ಯಾಯದ ಹೋರಾಟದ ಹಿನ್ನೆಲೆ ಅರಿಯದ ಮಾಜಿ ಸಂಸದ ಪ್ರತಾಪ್ ಸಿಂಹ ದಲಿತ ಸಂಘರ್ಷ ಸಮಿತಿ ಹಾಗೂ ದಲಿತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ ಹೇಳಿದರು.
ಟಿ. ನರಸೀಪುರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ನೀಲಿ ಶಾಲಿನ ಕುರಿತು ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿವೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಸಂಕೇತವಾಗಿರುವ ವಿಚಾರ ಅವಹೇಳನ ಮಾಡುವುದರಿಂದ ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡದೆ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಜಾತಿ, ಧರ್ಮದ ಆಧಾರದ ಮೇಲೆ ಸಂಘರ್ಷಕ್ಕೆ ಕಾರಣವಾಗುವಂತಹ ಬೆಳವಣಿಗೆಗಳಿಗೆ ಅವಕಾಶ ನೀಡದೆ ಎಲ್ಲ ಸಮುದಾಯಗಳ ನಡುವೆ ಸೌಹಾರ್ದತೆ ಹಾಗೂ ಪರಸ್ಪರ ಗೌರವದ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನರಸಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ದೇವದಾಸ, ಆಂಜನೇಯ್ಯ, ಕೊಳಗಲ್ಲು ಮಲ್ಲಯ್ಯ, ಬಿ. ರಮೇಶ್, ಎಂ.ಎರಿಸ್ವಾಮಿ, ಬೆಳಗಲ್ ಹುಲುಗಪ್ಪ, ಮಲ್ಲಪ್ಪ, ಶಂಕರ್, ಎರಿಸ್ವಾಮಿ ಹಲಕುಂದಿ, ಭೀಮಶಂಕರ, ದುರ್ಗಾದಾಸ್, ಹನುಮಂತಪ್ಪ ಎತ್ತಿನಬೂದಿಹಾಳ್, ಶಿವು ಅಸುಂಡಿ, ಲಕ್ಷ್ಮಣ ಮತ್ತಿತರರು ಇದ್ದರು.