ಹಗರಿಬೊಮ್ಮನಹಳ್ಳಿ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮರೆತು, ಹಸಿ ಸುಳ್ಳುಗಳ ಮೂಲಕ ಮಹಿಳೆಯರ ಘನತೆಗೆ ಧಕ್ಕೆ ಬರುವಂತೆ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಎಸ್.ಭೀಮನಾಯ್ಕ ಹೇಳಿದರು.
ಮೋದಿ ಅತ್ಯಂತ ಕೀಳುಮಟ್ಟಕ್ಕೆ ಇಳಿದು ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ದಲಿತ ಸಮುದಾಯದವರು ಯಾವಾಗಲೂ ಕಾಂಗ್ರೆಸ್‌ನ ಪಿಲ್ಲರ್‌ಗಳು. ೧೦ ವರ್ಷದ ಅಧಿಕಾರದ ಅವಧಿಯಲ್ಲಿ ದಲಿತ ಸಮಾಜದ ಪರ ಕೆಲಸ ಮಾಡಿದ್ದೇನೆ. ಪಟ್ಟಣದ ಚಿಂತ್ರಪಳ್ಳಿ ಬಳಿ ಬೃಹತ್ ಅಂಬೇಡ್ಕರ್ ಭವನ, ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಮಾಡುವುದರಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದೇನೆ. ಪ್ರತಿ ಹಳ್ಳಿಗೂ ಸುಸಜ್ಜಿತ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ₹೧೬೦ ಕೋಟಿ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ, ಮೊರಾರ್ಜಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶ್ರೀರಾಮುಲು ತಂಗಿ ಶಾಂತಾ ಸಂಸದರಾದಾಗ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಅಖಂಡ ಜಿಲ್ಲೆಯ ಮತದಾರರು ಪ್ರಬುದ್ಧ, ಪ್ರಾಮಾಣಿಕ ರಾಜಕಾರಣಿ ಆಯ್ಕೆಗೆ ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮ ಅಭ್ಯರ್ಥಿ ತುಕಾರಾಂ ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ಎಂದು ಬಣ್ಣಿಸಿದರು.ದಲಿತ ಸಮಾಜದ ಹಿರಿಯ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿ, ದಲಿತ ಸಮಾಜದ ಯುವಕರು ಜಾಗೃತರಾಗಬೇಕಿದೆ. ನಮ್ಮ ಸಮಾಜದ ಬಡವರಿಗೆ ಭೂಮಿ, ವಸತಿ ಸೌಲಭ್ಯ ಕೊಟ್ಟದ್ದು ಕಾಂಗ್ರೆಸ್ ಎಂಬುದನ್ನು ಮರೆಯಬಾರದು. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಾಗ ದಲಿತರನ್ನು ಕಾಪಾಡಿದ್ದು ಕಾಂಗ್ರೆಸ್. ಮೋದಿ ಮೋದಿ ಎಂದು ಅರ್ಥವಿಲ್ಲದೇ ಕುಣಿಯುವ ಯುವಕರು ಇತಿಹಾಸ ಅರಿಯಬೇಕಿದೆ ಎಂದರು.
ಜಗಜೀವನ್‌ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ (ಲಿಡ್ಕರ್) ಅಧ್ಯಕ್ಷ ಮುಂಡ್ರಗಿ ನಾಗರಾಜ, ಕೆಪಿಸಿಸಿ ಸದಸ್ಯ ಎಲ್.ಮಾರೆಣ್ಣ, ಕೊಟ್ಟೂರು ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಪರುಶುರಾಮ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು.