ಮತ ಬ್ಯಾಂಕಿಗಾಗಿ ಕಾಂಗ್ರೆಸ್‌ನಿಂದ ದಲಿತರ ಓಲೈಕೆ: ಪರಮಾಂದ್ ಆರೋಪ

KannadaprabhaNewsNetwork | Published : Apr 3, 2024 1:30 AM

ಸಾರಾಂಶ

ದಲಿತ ವಿರೋಧಿ ಹಾಗೂ ಅವರ ಸಮಾಧಿ ಮೇಲೆ ಕುಳಿತು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ದಲಿತರನ್ನು ತುಳಿದು ಅವರ ಬೆನ್ನಿಗೆ ಚೂರಿ ಹಾಕುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಇದುವರೆಗೂ ಬಳಸಿಕೊಂಡು ಬಂದಿದೆ. ಸ್ವತಃ ನೆಹರೂರವರೇ ಮೀಸಲಾತಿ ವಿರೋಧಿಸಿ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಎರಡು ಬಾರಿ ಅವರನ್ನು ಸೋಲಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಕೇವಲ ಮತ ಬ್ಯಾಂಕಿಗಾಗಿ ಮಾತ್ರ ದಲಿತರನ್ನು ಓಲೈಸುತ್ತದೆ. ವಿವರಿಸಲಾಗದಷ್ಟು ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್ಪಿ ಮೋರ್ಚಾ ರಾಜ್ಯ ಕಾರ್‍ಯದರ್ಶಿ ಪರಮಾಂದ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ವಿರೋಧಿ ಹಾಗೂ ಅವರ ಸಮಾಧಿ ಮೇಲೆ ಕುಳಿತು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ದಲಿತರನ್ನು ತುಳಿದು ಅವರ ಬೆನ್ನಿಗೆ ಚೂರಿ ಹಾಕುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಇದುವರೆಗೂ ಬಳಸಿಕೊಂಡು ಬಂದಿದೆ. ಸ್ವತಃ ನೆಹರೂರವರೇ ಮೀಸಲಾತಿ ವಿರೋಧಿಸಿ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.

ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಎರಡು ಬಾರಿ ಅವರನ್ನು ಸೋಲಿಸಿದೆ. ಜೊತೆಗೆ ಅವರನ್ನು ಸೋಲಿಸಿದ ವ್ಯಕ್ತಿಗೆ ಪದ್ಮಪ್ರಶಸ್ತಿ ನೀಡಿರುವುದು ಕಾಂಗ್ರೆಸ್‌ನ ದಲಿತ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಮಮತಾ, ಕೇಜ್ರಿವಾಲ್ ಪ್ರಸ್ತಾಪಿಸಿದ ಮೇಲೂ ಸಿದ್ದರಾಮಯ್ಯ, ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡೋಣ ಎನ್ನುತ್ತಿದ್ದಾರೆ. ಇದಕ್ಕಿಂತಲೂ ಬೇರೆ ಉದಾಹರಣೆ ಬೇಕೆ ಎಂದು ಟೀಕಿಸಿದರು.

ಎಸ್‌ಸಿಪಿ/ಟಿಎಸ್‌ಪಿ ಫಂಡ್‌ನ 25 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ದುರ್ಬಳಕೆ ಮಾಡಿ ಮುಸಲ್ಮಾನರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿರುವ ಸಿದ್ದರಾಮಯ್ಯ ಅವರು, ಇದೇ ದಲಿತ ವಿರೋ ಕಾಂಗ್ರೆಸ್ ನೀತಿ ಮುಂದುವರಿಸಿದ್ದಾರೆ ಎಂದು ದೂರಿದರು.

ಅಂಬೇಡ್ಕರ್ ಅವರಿಗೆ ಸಂಬಂಸಿದ 5 ಸ್ಥಳಗಳನ್ನು ಅಭಿವೃದ್ಧಿಪಡಿಸಲು ಪಂಚತೀರ್ಥ ಯೋಜನೆ ಪ್ರಾರಂಭಿಸಿತು. ದೆಹಲಿಯಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನೂ ಮೋದಿ ಸರ್ಕಾರ ನಿರ್ಮಿಸಿದೆ. ಇಲ್ಲಿ ಪ್ರತಿಮೆಗಳಲ್ಲಿ ಒಂದನ್ನು ಸ್ವಲ್ಪ ವಿಭಿನ್ನವಾದ ಭಂಗಿಯಲ್ಲಿ ಸಂವಿಧಾನದೊಂದಿಗೆ ಕುರ್ಚಿಯಲ್ಲಿ ಆರಾಮವಾಗಿ ಕುಳಿತಿರುವುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಜಿ. ಶಂಕರ್, ಮುಖಂಡರಾದ ನಿತ್ಯಾನಂದ, ಧರಣೇಂದ್ರ, ಹರೀಶ್, ಅನಿಲ್, ಸಿ.ಟಿ. ಮಂಜುನಾಥ್ ಇತರರು ಇದ್ದರು.

Share this article