ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲಾ ಚಲವಾದಿ ಮಹಾಸಭಾದಿಂದ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ೧೦೧ ಜಾತಿಗಳಿವೆ. ಈ ಜಾತಿಗಳಲ್ಲಿ ಒಗ್ಗಟ್ಟು ಇರಬೇಕು. ನಾವು ಎಡ, ಬಲ, ಮಧ್ಯಮ ಎನ್ನದೇ ಎಲ್ಲರೂ ಕೂಡಿ ಬಾಳಬೇಕು ಎಂದು ಸಚಿವ ಡಾ.ಮಹಾದೇವಪ್ಪ ಕರೆನೀಡಿದರು.ದೇಶದಲ್ಲಿ ೪೦ ಕೋಟಿ ದಲಿತರಿದ್ದಾರೆ. ಈ ದೇಶದ ಮೂಲ ನಿವಾಸಿಗಳು ನಾವಿಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯಬಂದು ೭೬ ವರ್ಷ ಕಳೆದರೂ ಇಂದಿಗೂ ನಾವು ಸ್ವಂತ ಮನೆಗಳನ್ನು ಕಟ್ಟಿಕೊಳ್ಳಲು ಪರದಾಡುವ ಸ್ಥಿತಿ ಇದೆ. ನಾವೆಲ್ಲರೂ ಅಂಬೇಡ್ಕರ್ ಅವರನ್ನು ಅರಿತುಕೊಂಡು ಪ್ರಶ್ನಿಸುವ ಗುಣದೊಂದಿಗೆ ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ ಎಂದರು.
ದಲಿತ ಸಮಾಜಕ್ಕೆ ನಾಯಕತ್ವದ ಕೊರತೆ ಇದೆ. ಯಾವ ಸಮಾಜಕ್ಕೆ ನಾಯಕತ್ವ ಕೊರತೆ ಇರುತ್ತದೆಯೋ ಆ ಸಮಾಜ ಅನಾಥ ಸಮಾಜ ಆಗುತ್ತದೆ. ದಲಿತರು, ಹಿಂದುಳಿದವರು, ಮುಸ್ಲಿಮರು ಸಂಘಟನಾತ್ಮಕ ಹೋರಾಟ ನಡೆಸಿ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರಿಗೆ ಯಾರೂ ಸರಿಸಾಟಿಯಲ್ಲ. ವಿಶ್ವಸಂಸ್ಥೆ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಣೆ ಮಾಡುತ್ತದೆ. ನಾವೆಲ್ಲರೂ ಸಂವಿಧಾನದ ಆಶಯದಂತೆ ಮುನ್ನಡೆಯಬೇಕು ಎಂದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ದಲಿತರು ಒಂದುಗೂಡಿದರೆ, ಸಂವಿಧಾನ ಉಳಿಯುತ್ತದೆ. ಇಂತಹ ಚಿಂತನಾ ಕಾರ್ಯಕ್ರಮಗಳನ್ನು ಚಲವಾದಿ ಮಹಾಸಭಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಸಿರಾಜ್ ಶೇಕ್, ಮುಖಂಡರಾದ ರಾಜಶೇಖರ್ ಹಿಟ್ನಾಳ್, ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ಎ. ಮಾನಯ್ಯ, ಮುಂಡ್ರಗಿ ನಾಗರಾಜ, ಗುಜ್ಜಲ ನಾಗರಾಜ, ಸಯ್ಯದ್ ಮೊಹಮ್ಮದ್, ಕೆ. ರವಿಕುಮಾರ, ನರಸಪ್ಪ, ಸಿದ್ದಯ್ಯ, ಕೊಟ್ರಪ್ಪ, ಸುಭಾಷ್ ನಾಟಿಕರ್, ಚಲುವರಾಜ್, ಶಿವಕುಮಾರ, ನಿಂಬಗಲ್ ರಾಮಕೃಷ್ಣ, ಬಸವರಾಜ, ಈರಮ್ಮ, ಮಾಳಗಿ ಅಸ್ಲಾಂ, ಈರಮ್ಮ ಮತ್ತಿತರರಿದ್ದರು. ಸೋಮಶೇಖರ್ ಬಣ್ಣದಮನೆ, ಯಲ್ಲಪ್ಪ ಭಂಡಾರ್‌ದಾರ್ ನಿರ್ವಹಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಸಾರೋಟದಲ್ಲಿ ಕೂರಿಸಿ ದಲಿತ ಸಮುದಾಯ ಭವ್ಯ ಮೆರವಣಿಗೆ ನಡೆಸಿತು.