ದಾಂಡೇಲಿ: ವೆಸ್ಟ್‌ಕೋಸ್ಟ್ ಕಾಗದ ಕಾರ್ಖನೆಯ ಆಡಳಿತ ಮಂಡಳಿ ಮತ್ತು ಜಂಟಿ ಸಂಧಾನ ಸಮಿತಿಯ ನಡುವೆ ಸುಮಾರು ೨೦ ತಿಂಗಳಿಗೂ ಹೆಚ್ಚು ಕಾಲ ನಿರಂತರ ಮಾತುಕತೆಯ ನಂತರ ವೇತನ ಪರಿಷ್ಕರಣೆಯ ಪ್ರಕ್ರಿಯೆಗೆ ಅಂತಿಮವಾಗಿದೆ. ಬೆಳಗಾವಿಯ ಕಾರ್ಮಿಕ ಆಯುಕ್ತರ ಎದುರು ತ್ರಿಪಕ್ಷಿಯ ಒಪ್ಪಂದದ ಅಧಿಕೃತ ಸಹಿ ಬೀಳುವುದೊಂದು ಬಾಕಿ ಇದೆ.ಪ್ರತಿ ೪ ವರ್ಷಕ್ಕೆ ಒಮ್ಮೆ ದಾಂಡೇಲಿಯ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿಯ ಚುನಾವಣೆ ನಡೆದು ಅವರ ಅವಧಿಯಲ್ಲಿ ವೇತನ ಪರಿಷ್ಕರಣೆ ಆಗುವ ಪ್ರಕ್ರಿಯೆ ನಡೆಯುತ್ತದೆ.
ಈ ಬಾರಿಯ ಜಂಟಿ ಸಂಧಾನ ಸಮಿತಿ ಅಸ್ತಿತ್ವಕ್ಕೆ ೨೦೨೩ರಲ್ಲಿ ಬಂದಿದ್ದು, ಆಗಿಂದಲೇ ವೇತನ ಪರಿಷ್ಕರಣೆಯ ಮಾತುಕತೆಯ ಮಂಡನೆಯನ್ನು ಆಡಳಿತ ಮಂಡಳಿಯ ಎದುರಿಟ್ಟಿದ್ದರು. ಹಲವು ಮನವಿ, ಮಾತುಕತೆಗಳ ನಡುವೆ, ಕಳೆದೆರಡು ತಿಂಗಳ ಹಿಂದೆ ಸರಣಿ ಧರಣಿ ಸೇರಿದಂತೆ ವೇತನ ಪರಿಷ್ಕರಣೆಗಾಗಿ ಹಲವು ರೀತಿಯ ಆಗ್ರಹಗಳು ನಡೆದಿದ್ದವು.ಆರಂಭದಲ್ಲಿ ಜಂಟಿ ಸಂಧಾನ ಸಮಿತಿಯವರು ಕಾರ್ಮಿಕರಿಗೆ ತಗಲುವ ವೆಚ್ಚ(ಸಿಟಿಸಿ) ₹೮೪ ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ನಿರಂತರ ಮಾತುಕತೆಯ ನಂತರ ಅದನ್ನು ₹೯ ಸಾವಿರಕ್ಕೆ ಕಡಿಮೆ ಮಾಡುತ್ತಾ ಬಂದಿದ್ದರು. ಅಂತಿಮವಾಗಿ ಜಂಟಿ ಸಂಧಾನ ಸಮಿತಿ ಹಾಗೂ ಕಾರ್ಮಿಕರ ನಿರೀಕ್ಷೆ ಕನಿಷ್ಠ ೫ ಸಾವಿರ ಹೆಚ್ಚಳವಾಗಬಹುದು ಎಂಬುದು ಇತ್ತು. ಈ ವಿಚಾರವಾಗಿ ಹಲವು ತಿಂಗಳಗಳ ಕಾಲ ಜಂಟಿ ಸಂಧಾನ ಸಮಿತಿ ಮತ್ತು ಆಡಳಿತ ಮಂಡಳಿಯ ನಡುವೆ ಮಾತುಕತೆಗಳು ನಡೆಯುತ್ತಲೇ ವಿಫಲವಾಗುತ್ತಾ ಬಂದಿತ್ತು.
ಜಂಟಿ ಸಂಧಾನ ಸಮಿತಿಯಲ್ಲಿ ಕಾರ್ಮಿಕ ಪ್ರತಿನಿಧಿಗಳಾಗಿದ್ದ ಎಸ್.ವಿ. ಸಾವಂತ, ವಿಷ್ಣು ವಾಜ್ವೆ, ಬಿ.ಡಿ. ಹಿರೇಮಠ ಇವರು ಕಾರ್ಮಿಕರ ಪರ ಮಾತುಕತೆಗೆ ಪ್ರತಿನಿಧಿಸಿದ್ದರೆ, ಆಡಳಿತ ಮಂಡಳಿಯ ಪರ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ಹಿರಿಯ ಅಧಿಕಾರಿಗಳಾದ ಅಶೋಕ ಶರ್ಮ, ವೇಲು ವೆಂಕಟೇಶ, ವಿಜಯ ಮಹಾಂತೇಶ ಮುಂತಾದವರು ಈ ಒಪ್ಪಂದ ಮಾತುಕತೆಯ ಪ್ರಕ್ರಿಯೆಯಲ್ಲಿದ್ದರು.ಎಷ್ಟು ಕಾರ್ಮಿಕರಿಗೆ ಲಾಭ?: ಈಗ ಆಗಿರುವ ವೇತನ ಒಪ್ಪಂದ ಸುಮಾರು ೪೦೦ ಸಿಬ್ಬಂದಿ(ಸ್ಟಾಫ್) ನೌಕರರು ೧೯೦೦ ಕಾರ್ಮಿಕರು ಸೇರಿದಂತೆ ೨೩೦೦ರಷ್ಟು ಒಟ್ಟು ಕಾರ್ಮಿಕರು ಇದರ ನೇರ ಲಾಭ ಪಡೆಯಲಿದ್ದಾರೆ. ಗುತ್ತಿಗೆ ಆಧಾರದ ಕೆಲವು ಕಾರ್ಮಿಕರು ಕೂಡ ಇದರ ಒಂದಿಷ್ಟು ಸೌಲಭ್ಯಗಳನ್ನು, ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ.
ವೇತನ ಪರಿಷ್ಕರಣೆಯಲ್ಲಿ ಏನಿದೆ?: ೨೦೨೩ರಿಂದ ಇಲ್ಲಿಯವರೆಗೆ ವೇತನ ಪರಿಷ್ಕರಣೆಯಲ್ಲಿ ಕಾರ್ಖಾನೆಯ ಪ್ರತಿ ಕಾರ್ಮಿಕನ ಮೇಲೆ ಮಾಸಿಕವಾಗಿ ತಗಲುವ ವೆಚ್ಚ(ಸಿಟಿಸಿ) ₹೪೭೦೦ ಕಳೆದ ಅವಧಿಯ ಪರಿಷ್ಕರಣೆಗಿಂತ ₹೬೦೦ ಮಾತ್ರ ಹೆಚ್ಚಳವಾಗಿದೆ. ಇನ್ನು ಕಾರ್ಮಿಕರ ಮೂಲವೇತನಕ್ಕೆ ನೇರವಾಗಿ ತಿಂಗಳಿಗೆ ₹೨೪೨೪ ಹೆಚ್ಚಳವಾಗುತ್ತದೆ. ಆರಂಭದಲ್ಲಿ ಸಿಟಿಸಿ ₹೮೪ ಸಾವಿರ ಕೇಳಿದ್ದ ಜೆಎನ್‌ಸಿ ಕೊನೆಗೆ ₹೪೭೦೦ಕ್ಕೆ ಒಪ್ಪಿಕೊಂಡಂತಾಗಿದೆ. ವೇತನ ಪರಿಷ್ಕರಣೆ ಅಂತಿಮವಾಯಿತು. ಕನಿಷ್ಠ ₹೫ ಸಾವಿರ ಸಿಟಿಸಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಒಂದಿಷ್ಟು ಅಸಮಾಧಾನವೇ ಆಗಿದೆ. ಈ ಪರಿಷ್ಕರಣೆಯಲ್ಲಿ ೨೦ ಪೈಸೆ ತಟ್ಟಿ ಭತ್ಯೆಯ ಜತೆಗೆ ಇನ್ನೂ ಹಲವು ಸೌಲಭ್ಯಗಳು ಸಿಗಲಿವೆ.