ಕಲಬುರಗಿ: ಇಲ್ಲಿನ ಶರಣಬಸವ ವಿವಿ ಆವರಣದಲ್ಲಿ ಗುರುವಾರ ರಾತ್ರಿ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ದಾಂಡಿಯಾ ನೈಟ್ಸನಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವೃಂದದವರು ಕುಣಿದು ಕುಪ್ಪಳಿಸಿ, ಹೆಜ್ಜೆಗೆ ಹೆಜ್ಜೆ ಹಾಕಿ ಸಂತೋಷಪಟ್ಟರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಕೋಮಲಾ ಅಪ್ಪ, ಶಿವಾನಿ ಅಪ್ಪ ಮತ್ತು ಮಹೇಶ್ವರಿ ಅಪ್ಪ ದೀಪ ಬೆಳಗಿಸುವ ಮೂಲಕ ದಾಂಡಿಯಾ ಕುಣಿತಕ್ಕೆ ಚಾಲನೆ ನೀಡಿದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರ ಪತ್ನಿ, ಪ್ರೇಮಲತಾ ಅಲ್ಲಮ ಪ್ರಭು ಪಾಟೀಲ, ಶರಣಬಸವ ವಿವಿ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಇದ್ದರು. ಡಾ. ಶರಣಬಸವಪ್ಪ ಅಪ್ಪಾಜಿಯವರ ಮೂರು ಸುಪುತ್ರಿಯವರು ತಮ್ಮ ವಿಶಿಷ್ಠವಾದ ವೇಷಭೂಷಣದಲ್ಲಿ ಕಾಣಿಸಿಕೊಂಡು ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಜೊತೆಯಾಗಿ ದಾಂಡಿಯಾ ಕುಣಿತಕ್ಕೆ ಹೆಜ್ಜೆಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ದಾಂಡಿಯಾ ನೈಟ್ಸನಲ್ಲಿ ವಿವಿಧ ಕಡೆ ಕಣ್ಮನ ಸೆಳೆಯುವ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು. ದಾಂಡಿಯಾ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ವಿದ್ಯಾರ್ಥಿಗಳು ಪ್ರಾಧ್ಯಾಪಕರಾದಿಯಾಗಿ ಎಲ್ಲರೂ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಶರಣಬಸವ ವಿದ್ಯಾವರ್ಧಕ ಸಂಘದಡಿಯಲ್ಲಿ ಬರುವ ವಿವಿಧ ಶಿಕ್ಷಣ ಸಂಸ್ಥೆಗಳ ಹಾಗೂ ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು ಪಾಲ್ಗೊಂಡಿದ್ದರು.