ಸಂವಿಧಾನ ಕೆಟ್ಟವರ ಕೈಗೆ ಹೋದರೆ ಅಪಾಯ: ಸಿಎಂ

KannadaprabhaNewsNetwork | Published : Nov 27, 2024 1:31 AM

ಸಾರಾಂಶ

ಸಂವಿಧಾನ ಕೆಟ್ಟವರ ಕೈಗೆ ಸೇರಿದರೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಂವಿಧಾನ ಪಾಲನೆ ಮಾಡುವವರ ಕೈಯಲ್ಲಿ ಸಂವಿಧಾನ ಇರಬೇಕು ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.

ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಅಂಗೀಕರಣ 75ನೇ ದಿನೋತ್ಸವ ಉದ್ಘಾಟಿಸಿ, ಪ್ರಜಾಪ್ರಭುತ್ವ ದಿನದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಅದರ ಆಶಯ ಜಾರಿಗೆ ಬರುತ್ತದೆ. ಇಲ್ಲದಿದ್ದರೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು, ಪಾಲಿಸುವುದು ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವವನ್ನು ಪಾಲಿಸಬೇಕು ಎಂದರ್ಥ. ಜಾತೀಯತೆ ಹೋಗಿ ಸಮಾನತೆ ಬರಬೇಕು ಎಂದರೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಸಂವಿಧಾನ ಎಂದರೆ ಎಲ್ಲ ಜಾತಿ, ಧರ್ಮಗಳನ್ನು ಕಾಪಾಡುವ ಮಹಾಗ್ರಂಥ. ಇದರ ಆಶಯಗಳನ್ನು ಪೂರೈಸಲು ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ. ದೇಶದ 140 ಕೋಟಿ ಜನರ ರಕ್ಷಾ ಕವಚವೇ ಸಂವಿಧಾನ. ರಾಜಕಾರಣಿಗಳು ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಮಾರಾಟ ಆಗಬಾರದು ಎಂಬುದು ಅಂಬೇಡ್ಕರ್‌ ಮಾತು. ಅದನ್ನು ನಾವೆಲ್ಲ ಪಾಲಿಸಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ವಿಶ್ವದ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ ಬಳಿಕ ಅಂಬೇಡ್ಕರ್ ಹಾಗೂ ಇತರೆ ತಜ್ಞರು ಸೇರಿ ತಮ್ಮದೇ ಶೈಲಿಯಲ್ಲಿ ದೇಶಕ್ಕೆ ಉತ್ಕೃಷ್ಟ ಅತ್ಯುನ್ನತವಾದ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನ ರಕ್ಷಣೆ ಮಾಡುವುದೇ ಕಾಂಗ್ರೆಸ್‌ನ ಮೂಲ ಗುರಿ ಎಂದು ತಿಳಿಸಿದರು.

ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್, ನಜೀರ್ ಅಹ್ಮದ್, ಶಾಸಕ ಯು.ಬಿ.ವೆಂಕಟೇಶ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಇಲಾಖೆ ಪ್ರಧಾನ ಕಾರ್ಯದರ್ಶಿ ಮಣ್ಣಿವಣ್ಣನ್, ಆಯುಕ್ತ ರಾಕೇಶ್‌ಕುಮಾರ್ ಇತರರಿದ್ದರು.ಟ್ಯಾಬ್ ವಿತರಣೆ

ಕರ್ನಾಟಕ ರಾಜ್ಯ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಇತರೆ ಪೂರಕ ಪರೀಕ್ಷೆಗಳಿಗೆ ಅನುಕೂಲವಾಗುವ ಟ್ಯಾಬ್‌ಗಳನ್ನು ಇದೇ ವೇಳೆ ಸಿದ್ದರಾಮಯ್ಯ ವಿತರಿಸಿದರು. ಜತೆಗೆ ಕರ್ನಾಟಕ ರಾಜ್ಯ ವಸತಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವೆಬ್‌ಸೈಟ್‌ಗೆ ಇದೇ ವೇಳೆ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ₹3 ಕೋಟಿಗೂ ಅಧಿಕ ಮಂದಿ ಸೇರಿ ಮಾನವ ಸರಪಳಿ ರೂಪಿಸಿದ ಕಾರ್ಯಕ್ರಮದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದರ ಪ್ರಮಾಣ ಪತ್ರ ಪಡೆದರು.

Share this article