ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ, ತಾಲೂಕಿನ ಸಮಾನ ಮನಸ್ಕರರ ವೇದಿಕೆ, ರಾಜ್ಯ ರೈತಸಂಘ, ವಿವಿಧ ದಲಿತ ಸಂಘಟನೆಗಳು, ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆ, ಉದಯರವಿ ಟ್ರಸ್ಟ್, ಪದವಿ ಪೂರ್ವ ಉಪನ್ಯಾಸಕರ ಸಂಘ, ಸಮಾಗಮ ವೆಲ್ ಫೇರ್ ಫೌಂಡೇಷನ್, ಸ್ವಾಭಿಮಾನಿ ನೌಕರರ ಬಳಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕೇಂದ್ರಗಳ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು- ಬರಹ ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಆತಂಕದ ಪರಿಸ್ಥಿತಿಯಲ್ಲಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಬದಿಗೊತ್ತುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಸೇರಿದಂತೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಅಂಬೇಡ್ಕರ್ ಕುರಿತ ವಿಚಾರ ಸಂಕಿರಣ ಆಯೋಜಿಸಿರುವುದು ಅಭಿನಂದನೀಯ ಎಂದರು.ಅಮ್ಮನಿಲ್ಲದ ಮನೆ ಅನಾಥವಾಗುವಂತೆ ಅಂಬೇಡ್ಕರ್ ಚಿಂತನೆಗಳಿಲ್ಲದ ದೇಶ ಅನಾಥವಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಸೇರಿದಂತೆ ಎಲ್ಲಾ ಮೇರು ವ್ಯಕ್ತಿಗಳನ್ನು ಜಾತಿ ಚೌಕಟ್ಟಿನಲ್ಲಿ ಬಂಧಿಸಲಾಗುತ್ತಿದೆ. ಪ್ರತಿಯೊಬ್ಬರೂ ಮಹನೀಯರ ಚಿಂತನೆಗಳನ್ನು ಅಳವಡಿಸಿಕೊಂಡು ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂವಿ.ರಾಜೇಗೌಡ, ಜಾಗೃತ ಕರ್ನಾಟಕ ವೇದಿಕೆ ಸಂಚಾಲಕ ಬಿ.ಸಿ.ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ಎಸ್‌ಸಿ/ ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಯೋಗೇಶ್, ದಲಿತ ಮುಖಂಡ ಸೋಮಸುಂದರ್, ಬಸ್ತಿ ರಂಗಪ್ಪ, ರೈತ ಮುಖಂಡ ಕೆ.ಆರ್.ಜಯರಾಂ ಇದ್ದರು.