ಅಪಾಯ ಬಿಜೆಪಿಗೆ ಹೊರತೂ ಮತ್ತಾರಿಗೂ ಅಲ್ಲ: ಹರಿಪ್ರಸಾದ್

KannadaprabhaNewsNetwork |  
Published : Apr 16, 2024, 01:03 AM IST
ಉದ್ಘಾಟಿಸಲಾಯಿತು  | Kannada Prabha

ಸಾರಾಂಶ

೫೬ ಇಂಚಿನ ವಿಶ್ವಗುರು ನರೇಂದ್ರ ಮೋದಿಯವರು ೧೦ ವರ್ಷಗಳಲ್ಲಿ ಏನು ಮಾಡಿದ್ದೀರಿ ಎನ್ನುವುದನ್ನು ತಿಳಿಸಲಿ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಆಗ್ರಹಿಸಿದರು.

ಹೊನ್ನಾವರ: ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಬಿಜೆಪಿಗರು ಹೇಳುತ್ತಾರೆ. ಅಪಾಯ ಇರುವುದು ಬಿಜೆಪಿಗೆ ಹೊರತು ಯಾವ ಧರ್ಮಕ್ಕೂ ಅಲ್ಲ‌ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಮಲ ಪಾಳಯದ ವಿರುದ್ಧ ಕಿಡಿಕಾರಿದರು.

ತಾಲೂಕಿನ ಮಾವಿನಕುರ್ವಾ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿ, ೫೬ ಇಂಚಿನ ವಿಶ್ವಗುರು ನರೇಂದ್ರ ಮೋದಿಯವರು ೧೦ ವರ್ಷಗಳಲ್ಲಿ ಏನು ಮಾಡಿದ್ದೀರಿ ಎನ್ನುವುದನ್ನು ತಿಳಿಸಲಿ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಸುಳ್ಳು ಹೇಳುವ ಅವಶ್ಯಕತೆ ನಮಗಿಲ್ಲ. ಬಿಜೆಪಿಗರಿಗೆ ಸುಳ್ಳೇ‌‌ ಬಂಡವಾಳ ಎಂದು ಕಿಡಿಕಾರಿದರು.

ಕಾಟಾಚಾರಕ್ಕೆ ದೇವರನ್ನು ನಂಬುವವರೂ ನಾವಲ್ಲ. ಮಠ- ದೇವಸ್ಥಾನ ಕಟ್ಟುವುದೇ ನನ್ನ ಕೆಲಸ ಎಂದ ಅವರು, ತೆರಿಗೆ ಹಣದಿಂದಲೇ ಗ್ಯಾರಂಟಿ ಯೋಜನೆ ನೀಡುತ್ತಿರುವುದು ನಿಜ. ಬಿಜೆಪಿ ಆಡಳಿತದಲ್ಲಿ ಈ ತೆರಿಗೆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಮತದಾನವೆಂಬ ಅಧಿಕಾರ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಮತಗಳು ಮಾರಾಟವಾಗಬಾರದು. ೧೦ ವರ್ಷಗಳ ಕಾಲ ಬಿಜೆಪಿ, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನ ಈಡೇರಿಸಿಲ್ಲ. ಆರು ಬಾರಿ ಆಯ್ಕೆಯಾದ ಸಂಸದರು ಮಾಡಿದ್ದೇನಿದೆ ಎಂದು ವ್ಯಂಗ್ಯವಾಡಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು, ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್‌ ಅವರ ವರೆಗೆ ಕಾಂಗ್ರೆಸ್ ಜನಪರ ಆಡಳಿತ ನೀಡಿದೆ. ಆದರೆ ೧೦ ವರ್ಷಗಳಲ್ಲಿ ಬಿಜೆಪಿ ಮಾಡಿದ್ದೆಲ್ಲ ಅನಾಚಾರ. ಆರು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿಯ ಸಾಧನೆಯೂ ಶೂನ್ಯ ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ನನ್ನ ಜನ, ನನ್ನ ಸಮಾಜಕ್ಕೋಸ್ಕರ ಮತ ಭಿಕ್ಷೆ ಕೇಳುತ್ತಿದ್ದೇನೆ. ಈ ಭಿಕ್ಷೆ ಕೇಳಲು ನನಗೆ ಯಾವ ಅಳುಕೂ ಇಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಖಲೀಲ್ ಶೇಖ್ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ