-ಕಪ್ಪುಪಟ್ಟಿ ಧರಸಿ ಸ್ವಾತಂತ್ರೋತ್ಸವ ಆಚರಣೆ -ಶಿಕ್ಷಣ ಇಲಾಖೆಯ ಧೋರಣೆಗೆ ಖಂಡನೆ
ಕನ್ನಡಪ್ರಭ ವಾರ್ತೆ ರಾಮನಗರನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ, ಹೊಸ ಶಿಕ್ಷಣ ಸಂಸ್ಥೆಗಳಿಗಾಗಿ ರಚಿಸಿರುವ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳ ಮೇಲು ಹೇರುತ್ತಿರುವ ಶಿಕ್ಷಣ ಇಲಾಖೆಯ ಧೋರಣೆಯನ್ನು ಖಂಡಿಸಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ ಎಂದು ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದರು.
ನಗರದ ಹೋಲಿ ಕ್ರೆಸೆಂಟ್ ಶಾಲೆಯಲ್ಲಿ ಉಸ್ಮಾರ್ಡ್ ಸಂಘಟನೆಯ ಶಾಲೆಗಳ ಸಭೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಆ.15ರಂದು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮತ್ತು ಸಿಬ್ಬಂದಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಸ್ವಾತಂತ್ರ್ಯ ದಿನ ಆಚರಿಸುತ್ತೇವೆ ಎಂದು ಹೇಳಿದರು.ಸರ್ಕಾರ ಮತ್ತು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳನ್ನ ನಿಯಮಗಳ ಹೆಸರಿನಲ್ಲಿ ಹಿಂಸೆ ಮಾಡುತ್ತಿವೆ. ಅಗ್ನಿಶಾಮಕ ಪ್ರಮಾಣ ಪತ್ರ, ಭೂನಕ್ಷೆ ಮಂಜೂರು, ಭೂ ಪರಿವರ್ತನೆ ಸೇರಿ ಹಲವು ಪ್ರಮಾಣ ಪತ್ರ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪುಗಳನ್ನು ಶಿಕ್ಷಣ ಇಲಾಖೆ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂತನವಾಗಿ ಸ್ಥಾಪನೆಯಾಗುವ ಶಿಕ್ಷಣ ಸಂಸ್ಥೆಗಳಿಗೆ ಹಲವಾರು ನಿಯಮಗಳಿವೆ. ಈ ವಿಚಾರದಲ್ಲಿ ನಮ್ಮ ತಕರಾರು ಇಲ್ಲ. ಆದರೆ ಶಿಕ್ಷಣ ಇಲಾಖೆಯೇ ಮಾನತ್ಯೆ ಕೊಟ್ಟು ನವೀಕರಿಸಿರುವ 2017-18ರ ಒಳಗೆ ನಿರ್ಮಾಣವಾದ ಶಾಲೆಗಳಿಗೂ ಇದೇ ನಿಯಮಗಳನ್ನು ಹೇರುತ್ತಿರುವುದನ್ನು ಪ್ರಶ್ನಿಸುತ್ತಿದ್ದೇವೆ ಎಂದರು.ಹೊಸ ನಿಯಮಗಳಿಂದಾಗಿ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರ ಮಾಡಲೇ ಇಂತಹ ನಿಯಮ ಖಾಸಗಿ ಶಾಲೆಗಳ ಮೇಲೆ ಹೇರಲಾಗಿದೆ ಎಂದು ಶಶಿಕುಮಾರು ಗಂಭೀರ ಆರೋಪ ಮಾಡಿದರು.
2017-18ಕ್ಕೂ ಮುನ್ನ ಸ್ಥಾಪನೆಯಾಗಿರುವ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ನ್ಯಾಯಾಲಯವೂ ಸಹ ಹೊಸ ನಿಯಮಗಳನ್ನು ಈ ಶಾಲೆಗಳಿಗೆ ಹೇರಬಾರದು ಎಂದು ಸಷ್ಟವಾಗಿ ತಿಳಿಸಿವೆ. ಆದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ತೀರ್ಪನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಧು ಬಂಗಾರಪ್ಪ ಅತ್ಯಂತ ದುರ್ಬಲ ಶಿಕ್ಷಣ ಸಚಿವರು. ಖಾಸಗಿ ಶಾಲೆಗಳ ಮೇಲೆ ದಬ್ಬಾಳಿಕೆ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಸರ್ಕಾರ, ಶಿಕ್ಷಣ ಇಲಾಖೆ ನೀತಿ ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯನ್ನ ಕರಾಳ ದಿನಾಚರಣೆಯಾಗಿ ಆಚರಣೆ ಮಾಡುತ್ತಿದ್ದೇವೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಹೋರಾಟ ತೀವ್ರ ಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು
ಐಎಎಸ್ ಅಧಿಕಾರಿಗಳ ವಿರುದ್ದ ಕಿಡಿಕಿಡಿ:ಬೆಂಗಳೂರು ಕಳೆದ 40-50 ವರ್ಷಗಳ ಹಿಂದಿನ ಶಾಲಾ ಕಟ್ಟಡಳಿಗೆ ನಕ್ಷೆ ತೋರಿಸಿ, ಭೂಮಿ ಶಾಲೆಯ ಹೆಸರಿನಲ್ಲಿರುವುದನ್ನು ತೋರಿಸಿ, ಶಾಲೆಗಾಗಿಯೇ ನಿರ್ಮಿಸಿರುವ ಕಟ್ಟಡ ಎಂಬ ದಾಖಲೆಗಳನ್ನು ಕೊಡಿ ಎಂದು ಕೇಳುವ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಕನಿಷ್ಠ ಕಾಮನ್ಸೆನ್ಸ್ ಬೇಡವೇ? ಎಂದು ಪ್ರಶ್ನಿಸಿದರು.
ಸರ್ಕಾರಿ ಅಧಿಕಾರಿಗಳ ಕಿರುಕುಳ, ದೌರ್ಜನ್ಯ ಮತ್ತು ಭ್ರಷ್ಟಾಚಾರದಿಂದ ಸ್ವತಂತ್ರವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯವೇ ರದ್ದು ಮಾಡಿರುವ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಇಲಾಖೆ ನಿಯಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗದಂತೆ ಮಾಡಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಉಸ್ಮಾರ್ಡ್ ಅಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಕಿರಣ್ ಪ್ರಸಾದ್, ಮಾಜಿ ಅಧ್ಯಕ್ಷರಾದ ಸುಬ್ಬಯ್ಯ ಚೆಟ್ಟಿ, ಪಟೇಲ್ ಸಿ.ರಾಜು ಇತರರಿದ್ದರು.
ವರ್ಗಾವಣೆಯಲ್ಲಿ ಲಂಚ ಆರೋಪ:ಶಿಕ್ಷಣ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರ ಮಾಡಲೇ ಇಂತಹ ನಿಯಮ ಖಾಸಗಿ ಶಾಲೆಗಳ ಮೇಲೆ ಹೇರಲಾಗಿದೆ. ಶಿಕ್ಷಣ ಸಚಿವರು ಮತ್ತು ಇಲಾಖೆ ಮೇಲಧಿಕಾರಿಗಳು ಡಿಡಿಪಿಐ ಮತ್ತು ಬಿಇಒಗಳ ವರ್ಗಾವಣೆ ನಡೆಸಿ 25ರಿಂದ 30 ಲಕ್ಷ ರು.ಗಳ ವಸೂಲಿ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಖರ್ಚು ಮಾಡಿರುವುದನ್ನು ವಸೂಲಿ ಮಾಡಲು ಖಾಸಗಿ ಶಾಲೆಗಳ ಮಾನ್ಯತೆ, ನವೀಕರಣದಲ್ಲಿ ಲಂಚ ನೀಡುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ.
- ಶಶಿಕುಮಾರ್, ಕಾರ್ಯದರ್ಶಿ, ಕ್ಯಾಮ್ಸ್