ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರ ಮತ್ತು ಶಿಕ್ಷಣ ಇಲಾಖೆ ನಿಯಮಗಳ ಹೆಸರಿನಲ್ಲಿ ಖಾಸಗಿ ಶಾಲೆಗಳಿಗೆ ಮಾನಸಿಕ ಹಿಂಸೆ ನೀಡುತ್ತಿವೆ ಎಂದು ಆರೋಪಿಸಿ ಖಾಸಗಿ ಶಾಲೆಗಳು ಆ.15 ರಂದು ಖಾಸಗಿ ಶಾಲೆಗಳಲ್ಲಿ ಕರಾಳ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಖಾಸಗಿ ಶಾಲಾ ಮತ್ತು ಕಾಲೇಜುಗಳ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಶ್ರೀನಿವಾಸ್ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಶಾಲಾ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶವನ್ನು ಹೊರಡಿಸುತ್ತಾ 2022ರ ನವೆಂಬರ್ 14 ರಂದು ಉಚ್ಚ ನ್ಯಾಯಾಲಯ ಹೊರಡಿಸಿದ ಆದೇಶ ಗಾಳಿಗೆ ತೂರಿದೆ ಎಂದರು.ಭ್ರಷ್ಟಾಚಾರಕ್ಕೆ ದಾರಿ:
ಹೊಸ ನಿಯಮಗಳಲ್ಲಿ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಭೂ ಪರಿವರ್ತನೆ, ಪೊಲೀಸ್ ಇಲಾಖೆಯ ಅನುಮತಿ ಸೇರಿದಂತೆ ಇನ್ನಿತರ ಹಲವಾರು ನಿಯಮಗಳನ್ನು ಪಾಲಿಸಿದರೆ ಮಾತ್ರ ನವೀಕರಣ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಾರುಬಾರು ಮಾಡುವ ಮೂಲಕ ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ನೆಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಿನ ಅನ್ಯಾಯವನ್ನು ವಿರೋಧಿಸಿ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಕರೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದರು. ಇಡೀ ರಾಜ್ಯದಲ್ಲಿ ಎಷ್ಟು ಸರ್ಕಾರಿ ಶಾಲೆಗಳ ಕಟ್ಟಡಗಳು ಸುಸ್ಥಿತಿಯಲ್ಲಿವೆ. ಇಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಟ್ಟಡಗಳಿಗೆ ಒಂದು ನ್ಯಾಯ ಸರ್ಕಾರಿ ಶಾಲಾ ಕಟ್ಟಡಗಳಿಗೆ ಒಂದು ನ್ಯಾಯವೇ, ಶಿಕ್ಷಣ ಇಲಾಖೆಯ ಅಧೀನ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನಿಲುವು ಸೂಚಿಸಿ ಪ್ರತಿ ವರ್ಷವೂ ನವೀಕರಣ ಮಾಡಬೇಕೆಂದಿರುವುದು ಅವೈಜ್ಞಾನಿಕ ನೀತಿ. ಸರ್ಕಾರಿ ಶಾಲೆಗಳ ವ್ಯವಸ್ಥೆಯನ್ನ ಸೃಷ್ಟಿಯಲ್ಲಿಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಬಗ್ಗೆ ಆದೇಶಗಳನ್ನು ಹೊರಡಿಸಲಿ. ಇದಕ್ಕೆ ನಾವು ಬದ್ಧ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಹೆನ್ರಿ ಪ್ರಸನ್ನ ಕುಮಾರ್ ಮಾತನಾಡಿ, 2018ರ ಹಾಗೂ 2024ರ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾದ ಖಾಸಗಿ ಶಾಲೆಗಳ ನವೀಕರಣ ಕನಿಷ್ಠ 10 ವರ್ಷಕ್ಕೊಮ್ಮೆ ನೀಡಲು ಸೂಚಿಸುತ್ತಾರೆ. ಕರ್ನಾಟಕ ರಾಜ್ಯ ಪತ್ರ ಅಧಿಕೃತವಾಗಿ ಪ್ರಕಟಿಸಲಾದ ಮಾಹಿತಿಯನ್ನು ಧಿಕ್ಕರಿಸಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಾ ಪ್ರತಿಯೊಂದು ಇಲಾಖೆಗೆ ನಮ್ಮನ್ನು ಅಲೆಸಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಖಾಸಗಿ ಶಾಲೆಗೆ ಅನಗತ್ಯ ಮಾನದಂಡ
ಅಲ್ಲದೆ ಖಾಸಗಿ ಶಾಲೆಗಳಿಗೆ ಅನಗತ್ಯ ಮಾನದಂಡಗಳನ್ನು ಹೇರಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶವೇ ಇದರ ಅರ್ಥವಾಗಿದೆ ಎಂಬುದನ್ನ ನಾವು ಭಾವಿಸಬೇಕಾಗಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾದ ಮಾಹಿತಿಯಂತೆ ನಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರೆ ಅಧಿಕಾರಿಗಳು ನಮಗೆ ಮೇಲಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ನಾವು ಕರಾಳ ಸ್ವಾತಂತ್ರ್ಯ ದಿನ ಆಚರಣೆ ಮಾಡಲು ಜಿಲ್ಲೆಯ ಎಲ್ಲ ತಾಲೂಕುಗಳ ಖಾಸಗಿ ಅನುದಾನ ರಹಿತ ಶಾಲೆಗಳು ಶಿಕ್ಷಣ ಇಲಾಖೆಯ ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ಒಟ್ಟಾಗಿ ನಿರ್ಧರಿಸಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಖಾಸಗಿ ಶಾಲಾ ಮತ್ತು ಕಾಲೇಜು ಒಕ್ಕೂಟದ ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಪಿ.ಬಿ. ಶ್ರೀನಿವಾಸ್ ರೆಡ್ಡಿ, ಎನ್. ರಾಮಾಂಜನೇಯ, ಚಂದ್ರಮೌಳಿ, ಡಿ. ಎನ್.ರಘುನಾಥ್, ತೋಪಡ ನಾಗರಾಜ್, ಗುಡಿಬಂಡೆ ನಟರಾಜ್, ರಾಜು ಸಾಲೋಮನ್ ಸೇರಿದಂತೆ ಇನ್ನಿತರ ತಾಲೂಕುಗಳ ಅಧ್ಯಕ್ಷ ಉಪಾಧ್ಯಕ್ಷ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಇದ್ದರು.