ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್ ಪ್ರದಾನ

KannadaprabhaNewsNetwork |  
Published : Jul 20, 2026, 01:45 AM IST
ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್ ಪ್ರದಾನ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನ ವಿಕಾಸ’ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಅವರಿಗೆ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್‌ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಗೌರವ ಲಭಿಸಿದೆ.

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನ ವಿಕಾಸ’ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಅವರಿಗೆ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್‌ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಗೌರವ ಲಭಿಸಿದೆ.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯ ಮಟ್ಟದ ಪುನಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷ ಫಿಲಿಪ್ ಥೆವೆನೋಟ್‌ ಅವರು ಆನ್‌ಲೈನ್ ಮೂಲಕ ಪದವಿ ಪ್ರಕಟಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾ ಧರ್ಮಸ್ಥಳದಲ್ಲಿ ಪದವಿ ಪ್ರದಾನ ಮಾಡಿದರು.

ಅವಿನಾಶ್ ಗುಪ್ತಾ ಮಾತಾನಾಡಿ, ಹೇಮಾವತಿ ವೀ. ಹೆಗ್ಗಡೆ ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆಯನ್ನು ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಇವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಎಂದರು.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯ ಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿ ಶಾಂತಾರಾಮ್ ಆರ್.ಪೈ., ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

...ಬಾಕ್ಸ್...

ಸಾಮಾಜಿಕ ಕಳಕಳಿಯ ಪ್ರತಿರೂಪ....

ಹೇಮಾವತಿ ವೀ. ಹೆಗ್ಗಡೆ ಮಹಿಳಾ ಸಬಲೀಕರಣಕ್ಕಾಗಿ, ಸಮಾಜದ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳ ಪಟ್ಟಿ ಬಹು ದೊಡ್ಡದು. ಧರ್ಮಸ್ಥಳದ ಯುವತಿಯರನ್ನೇ ಸೇರಿಸಿಕೊಂಡು ಆರಂಭಿಸಿದ ‘ಕನ್ಯಾಕುಮಾರಿ ಯುವತಿ ಮಂಡಲ’ ಮುಂದೆ ಅವರ ಸಮಾಜ ಸೇವೆಗೆ ಮುನ್ನುಡಿ ಬರೆಯಿತು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಸ್ವಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಆರಂಭ, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಗೆಳತಿ ಕೌಟುಂಬಿಕ ಸಲಹಾ ಕೇಂದ್ರ’, ಗ್ರಾಮೀಣ ಮಹಿಳೆಯರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ, ಬೆಳೆಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಮಹಿಳೆಯರು ನೀರಿಗಾಗಿ ಪಡುತ್ತಿರುವ ಬವಣೆಯನ್ನು ನೀಗಿಸಲು ರಾಜ್ಯದ ಕೆರೆಗಳನ್ನು ಹೂಳೆತ್ತುವ ಕಾರ್ಯಕ್ರಮ, ರಾಜ್ಯದಲ್ಲಿರುವ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ’, ‘ಮಾಸಾಶನ’ ಕಾರ್ಯಕ್ರಮ ಹೀಗೆ ಅವರು ಕೈಗೊಂಡ ಕಾರ್ಯಕ್ರಮಗಳು ಒಂದೆರಡಲ್ಲ. ಇವರು ಕಲಾಪ್ರಿಯರೂ ಹೌದು. ಧರ್ಮಸ್ಥಳದ ಸಿಬ್ಬಂದಿಗಳನ್ನು ಸೇರಿಸಿ ಕಟ್ಟಿದ ‘ರಂಗಶಿವ ಕಲಾ ಬಳಗ’ ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನ ಗೆದ್ದಿದೆ. ಹಾಗೆಯೇ ಉಜಿರೆಯಲ್ಲಿ ‘ಸಮೂಹ'''''''' ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುವ ಮೂಲಕ ಉಜಿರೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾರಣೀಕರ್ತರಾಗಿದ್ದಾರೆ. ಓದು ಇವರ ಹವ್ಯಾಸಗಳಲ್ಲೊಂದು. ನಿರಂತರದ ‘ಗೆಳತಿ'''''''', ಮಂಜುವಾಣಿಯ ‘ಮಗಳಿಗೊಂದು ಪತ್ರ’ ಅಂಕಣದ ಮೂಲಕವೂ ಇವರು ಚಿರಪರಿಚಿತರು. ಇವರು ಕೈಗೊಂಡಿರುವ ಕೆಲಸ ಕಾರ್ಯಗಳು, ಸೇವೆಗಳು ನಾಡಿಗೆ ಮಾದರಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿಗೆ ಮಠಮಾನ್ಯಗಳ ಕೊಡುಗೆ ಅಪಾರ
ಶೇ.10ರಷ್ಟು ಮಜೂರಿ ಹೆಚ್ಚಳಕ್ಕೆ ಮಾಲೀಕರ ಅಸ್ತು