ಮಂಗಳೂರು: ದೇವಸ್ಥಾನ, ದೈವಸ್ಥಾನಗಳ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನೆ ಮಾಡುವ ಬದಲು ಅದನ್ನು ಜನರ ವಿವೇಚನೆಗೆ ಬಿಡಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದ್ದಾರೆ.ವಿಶ್ವಹಿಂದು ಪರಿಷತ್ತು, ಹಿಂದು ಯುವಸೇನೆ, ತುಳುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ, ಗುರುಪುರ ದೋಣಿಂಜೆಗುತ್ತು ಪ್ರಧಾನ ಗಡಿಪ್ರಧಾನರಾದ ಪ್ರಮೋದ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಧರ್ಮಾವಲೋಕನ (ಧರ್ಮಾಚರಣೆ: ಒಂದು ಅವಲೋಕನ) ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ದೇವಾಲಯ, ದೈವಸ್ಥಾನಗಳಿಗೆ ವಿಭಿನ್ನ ನಿಯಮ, ಕ್ರಮ, ನಂಬಿಕೆಗಳು ಇರುತ್ತವೆ. ಧಾರ್ಮಿಕ ನಂಬಿಕೆಗಳನ್ನು ಪ್ರಶ್ನೆ ಮಾಡದೇ ಜನರ ವಿವೇಚನೆಗೆ ಬಿಡಬೇಕು. ಆದರೆ ದೇವಸ್ಥಾನಕ್ಕೆ ಆಗಮಿಸದವರು, ದೈವಸ್ಥಾನ, ನೇಮಗಳಿಗೆ ಬಾರದವರು ಧಾರ್ಮಿಕ ನಂಬಿಕೆಯನ್ನು ವಿಮರ್ಶಿಸುವಂತಾಗಿದೆ. ಇದು ಸರಿಯಲ್ಲ ಎಂದರು.ಶರವು ರಾಘವೇಂದ್ರ ಶಾಸ್ತ್ರಿ ಮಾತನಾಡಿ, ಆಯಾ ದೇವಸ್ಥಾನಗಳಲ್ಲಿ ನಡೆಯಬೇಕಾದ ಆಚರಣೆಗಳು ಸ್ಥಗಿತಗೊಂಡರೆ ನಕಾರಾತ್ಮಕ ಅಂಶಗಳು ಹೆಚ್ಚುತ್ತವೆ. ಇದನ್ನು ಗಣನೆಗೆ ತೆಗೆದುಕೊಂಡು ಮುಂದುವರಿಯುವ ಅಗತ್ಯವಿದೆ ಎಂದು ಹೇಳಿದರು.
ಸಭೆಯ ನೇತೃತ್ವ ವಹಿಸಿದ್ದ ಪ್ರಮೋದ್ ಕುಮಾರ್ ರೈ ಮಾತನಾಡಿ, ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ದೇವತಾರಾಧನೆ, ದೈವಾರಾಧನೆ ಆಗಬೇಕಿದೆ ಎಂದರು.
ಕಾಂಞಂಗಾಡು ನಿತ್ಯಾನಂದ ಆಶ್ರಮ ಗುರುವನದ ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿ, ಮೂಲ್ಕಿ ಅರಮನೆಯ ದುಗ್ಗಣ್ಣ ಸಾವಂತ, ಕೂಳೂರು ಬೀಡಿನ ಆಶಿಕ್ ಕುಮಾರ್ ಜೈನ್, ವಿದ್ವಾಂಸ ಭಾಸ್ಕರ ಭಟ್ ಪಂಜ, ಬಪ್ಪನಾಡು ಕ್ಷೇತ್ರದ ಪ್ರಸಾದ್ ಭಟ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಮುಖರಾದ ಏಂತಿಮಾರು ಬೀಡು ಶೀನಪ್ಪ ರೈ, ಜಗದೀಶ ಅಧಿಕಾರಿ ಮೂಡುಬಿದಿರೆ, ಯೋಗೀಶ್ ಕುಮಾರ್ ಜೆಪ್ಪು, ಎಸ್.ಆರ್. ಹರೀಶ್ ಆಚಾರ್ಯ, ಜನಾರ್ದನ ಅರ್ಕುಳ, ಗಂಗಾಧರ ಶೆಟ್ಟಿ, ಡಾ. ಅಣ್ಣಯ್ಯ ಕುಲಾಲ್, ಭುಜಂಗ ಶೆಟ್ಟಿ ಜಪ್ಪುಗುಡ್ಡೆಗುತ್ತು, ರೋಹಿತ್ ಕುಮಾರ್ ಕಟೀಲು, ಭಾಸ್ಕರಚಂದ್ರ ಶೆಟ್ಟಿ, ಕಮಲಾಕ್ಷ ಗಂಧಕಾಡು, ಯೋಗೀಶ್ ಶೆಟ್ಟಿ ಜೆಪ್ಪು ಇದ್ದರು.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ವಾರುಣಿ ನಿರೂಪಿಸಿದರು. ಬಳಿಕ ದೈವಾರಾಧನೆ, ನಾಗಾರಾಧನೆ ಮತ್ತು ಧರ್ಮಾಚರಣೆ ಅವಲೋಕನ ಗೋಷ್ಠಿ ನಡೆಯಿತು.