ನೋಡಲು ಬಂದ ತಾಯಿ ಕಂಡು ದರ್ಶನ್‌ ಕಣ್ಣೀರು

KannadaprabhaNewsNetwork |  
Published : Jul 02, 2024, 01:53 AM ISTUpdated : Jul 02, 2024, 06:24 AM IST
Darshan Thoogudeepa Case

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿರುವ ನಟ ದರ್ಶನ್‌ ಸೋಮವಾರ ತಮ್ಮನ್ನು ಭೇಟಿಯಾದ ತಾಯಿ ಮೀನಾ ತೂಗುದೀಪ ಅವರನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟರು. ಮಗನ ಸ್ಥಿತಿ ಕಂಡು ಮೀನಾ ತೂಗುದೀಪ ಸಹ ಕಣ್ಣೀರು ಸುರಿಸಿ ಸಂತೈಸಿದರು ಎನ್ನಲಾಗಿದೆ.

 ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿರುವ ನಟ ದರ್ಶನ್‌ ಸೋಮವಾರ ತಮ್ಮನ್ನು ಭೇಟಿಯಾದ ತಾಯಿ ಮೀನಾ ತೂಗುದೀಪ ಅವರನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟರು. ಮಗನ ಸ್ಥಿತಿ ಕಂಡು ಮೀನಾ ತೂಗುದೀಪ ಸಹ ಕಣ್ಣೀರು ಸುರಿಸಿ ಸಂತೈಸಿದರು ಎನ್ನಲಾಗಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನದ ಬಳಿಕ ಇದೇ ಮೊದಲ ಬಾರಿ ತಾಯಿ ಮೀನಾ ಮತ್ತು ಸಹೋದರ ದಿನಕರ್‌ ತೂಗುದೀಪ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬಂದು ದರ್ಶನ್ ಅವರನ್ನು ಭೇಟಿಯಾದರು. ಇವರ ಜತೆಗೆ ಪತ್ನಿ ವಿಜಯಲಕ್ಷ್ಮೀ ಮತ್ತು ಪುತ್ರ ವಿನೀಶ್‌ ಸಹ ದರ್ಶನ್‌ ಅವರನ್ನು ಎರಡನೇ ಬಾರಿಗೆ ಭೇಟಿಯಾಗಿದ್ದರು.

ದರ್ಶನ್‌ ಬಂಧನ ಬಳಿಕ ತಾಯಿ ಮೀನಾ ತೂಗುದೀಪ ಮತ್ತು ಸಹೋದರ ದಿನಕರ್ ತೂಗುದೀಪ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಘಟನೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೋಮವಾರ ಕುಟುಂಬದ ಸದಸ್ಯರು ದರ್ಶನ್‌ರನ್ನು ಭೇಟಿಯಾದರು. ತಾಯಿ ಹಾಗೂ ಸಹೋದರನನ್ನು ಕಂಡಕೂಡಲೇ ದರ್ಶನ್‌ ಕಣ್ಣೀರಿಟ್ಟರು. ಈ ವೇಳೆ ತಾಯಿ ಮೀನಾ ತೂಗುದೀಪ ಅವರು ಸಹ ಕಣ್ಣೀರಿಟ್ಟು ದರ್ಶನ್‌ ಅವರನ್ನು ತಬ್ಬಿ ಸಂತೈಸಿದರು. ಸಹೋದರ ದಿನಕರ್‌ ಸಹ ದರ್ಶನ್‌ಗೆ ಧೈರ್ಯ ಹೇಳಿದರು.

ಪುತ್ರನ ಮುದ್ದಾಡಿದ ದರ್ಶನ್‌:

ಇನ್ನು ಪುತ್ರ ವಿನೀಶ್‌ನನ್ನು ತೊಡೆಯ ಮೇಲೆ ಕೂರಿಸಿಕೊಂಡು ದರ್ಶನ್‌ ಮುತ್ತಿಕ್ಕಿ ಭಾವುಕರಾದರು. ತಂದೆ-ಮಗನ ಬಾಂಧವ್ಯ ಕಂಡು ಪತ್ನಿ ವಿಜಯಲಕ್ಷ್ಮೀ ಕಣ್ಣೀರಿಟ್ಟರು. ಬಳಿಕ ದರ್ಶನ್‌ ಘಟನೆ ಸಂಬಂಧ ಕುಟುಂಬದ ಸದಸ್ಯರ ಜತೆಗೆ ಕೆಲ ಕಾಲ ಮಾತನಾಡಿದರು. ಕಾನೂನು ಹೋರಾಟದ ಬಗ್ಗೆಯೂ ಚರ್ಚಿಸಿದರು. ಹೊರಡುವಾಗಲೂ ತಾಯಿ ಮೀನಾ ತೂಗುದೀಪ ದರ್ಶನ್‌ಗೆ ಒದಗಿರುವ ಸ್ಥಿತಿ ಕಂಡು ಅಳುತ್ತಾ ಗೋಳಾಡಿದರು. ಈ ವೇಳೆ ದರ್ಶನ್‌ ಅವರೇ ತಾಯಿಗೆ ಸಮಾಧಾನ ಹೇಳಿದರು ಎಂದು ತಿಳಿದು ಬಂದಿದೆ.

ಪೊಲೀಸರ ನಡೆಗೆ ಆಕ್ರೋಶ:

ದರ್ಶನ್‌ ಕುಟುಂಬದ ಸದಸ್ಯರನ್ನು ಖಾಸಗಿ ಕಾರಿನಲ್ಲಿ ಖುದ್ದು ಪೊಲೀಸರೇ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆತಂದಿದ್ದರು. ಮಾಧ್ಯಮಗಳ ಕಣ್ತಿಪ್ಪಿಸಿ ಪೊಲೀಸರೇ ದರ್ಶನ್‌ ತಾಯಿ, ಸಹೋದರ, ಪತ್ನಿ, ಪುತ್ರನನ್ನು ಕರೆದೊಯ್ದು ದರ್ಶನ್‌ ಅವರನ್ನು ಭೇಟಿ ಮಾಡಿಸಿದರು. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರು ಮತ್ತು ಪ್ರಭಾವಿಗಳಿಗೆ ಬೇರೆ ಬೇರೆ ಕಾನೂನುಗಳಿವೆಯೇ ಎಂದು ಪ್ರಶ್ನಿಸಿದ್ದಾರೆ.

ದರ್ಶನ್‌ ಭೇಟಿಗೆ ಅವಕಾಶ ಕೊಡಿ: ಗೋಗರೆದ ವೃದ್ಧೆ

ನಟ ದರ್ಶನ್‌ ಅವರನ್ನು ಭೇಟಿಯಾಗಲು ಹುಬ್ಬಳ್ಳಿಯ ಅಭಿಮಾನಿ ರಾಜೇಶ್ವರಿ ಎಂಬ ವೃದ್ಧೆ ಸೋಮವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಬಳಿಗೆ ಬಂದಿದ್ದರು. ಕಾರಾಗೃಹದ ತಪಾಸಣಾ ಕೇಂದ್ರದ ಬಳಿ ನಾನು ಹುಬ್ಬಳ್ಳಿಯಿಂದ ಬಂದಿದ್ದೇನೆ. ನಾನು ನಟ ದರ್ಶನ್‌ ಅವರ ಅಭಿಮಾನಿ. ಅವರನ್ನು ಭೇಟಿಯಾಗಬೇಕು. ನನ್ನನ್ನು ಒಳಗೆ ಬಿಡಿ ಎಂದು ಗೋಗರೆದರು. ಆದರೂ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ನಾನು ಈ ಹಿಂದೆ ಎರಡು ಬಾರಿ ದರ್ಶನ್‌ ಅವರನ್ನು ಭೇಟಿಯಾಗಿದ್ದೆ. ಅವನು ತಪ್ಪು ಮಾಡಿದ್ದಾನೆ. ಆದರೆ, ಅವನಿಗೆ ಶಿಕ್ಷೆ ಕೊಡಬೇಡಿ. ಎಲ್ಲರೂ ತಪ್ಪು ಮಾಡುತ್ತಾರೆ. ಅವನೂ ಸಹ ಮಾಡಿದ್ದಾನೆ ಎಂದು ವೃದ್ಧೆ ಪೊಲೀಸರ ಬಳಿ ಮನವಿ ಮಾಡಿದ ಪ್ರಸಂಗವೂ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ