ನನ್ನನ್ನು ಅಧಿಕ ಮತಗಳಿಂದ ಗೆಲ್ಲಿಸಿದ ಕಾರ್ಯಕರ್ತರಿಗೆ ಚಿರಋಣಿ: ಶೋಭಾ

KannadaprabhaNewsNetwork |  
Published : Jul 02, 2024, 01:50 AM ISTUpdated : Jul 02, 2024, 09:02 AM IST
ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ವತಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಗೌರವಿಸಲಾಯಿತು. ಎಸ್.ಹರೀಶ್, ಎಚ್.ಸಿ.ತಮ್ಮೇಶ್ ಗೌಡ, ಕೃಷ್ಣಮೂರ್ತಿ, ಹನುಮಂತುಗೌಡ, ತಿಂಡ್ಲು ರಾಜಗೋಪಾಲ್, ಕೆ.ಎ.ಮುನೀಂದ್ರಕುಮಾರ್ ಇದ್ದರು. | Kannada Prabha

ಸಾರಾಂಶ

ಹೆಚ್ಚು ಮತಗಳನ್ನು ಕೊಡಿಸಿ ಗೆಲ್ಲಿಸಿದ ಬಿಜೆಪಿ ಕಾರ್ಯಕರ್ತರಿಗೆ ಋಣಿ ಆಗಿ ಇರುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

  ಬ್ಯಾಟರಾಯನಪುರ :  2.65 ಲಕ್ಷ ಮತಗಳ ಭಾರೀ ಅಂತರದಲ್ಲಿ, ನಿರೀಕ್ಷೆಗೂ ಮೀರಿದ ಹೆಚ್ಚಿನ ಬಹುಮತ ನೀಡಿ ನನ್ನನ್ನು ಗೆಲ್ಲಿಸಿರುವ ಕಾರ್ಯಕರ್ತರಿಗೆ ಸದಾ ಚಿರ ಋಣಿ ಆಗಿರುತ್ತೇನೆ, ಸದಾ ಅವರೊಟ್ಟಿಗೆ ಇರುತ್ತೇನೆ ಎಂದು ಕೇಂದ್ರ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ವತಿಯಿಂದ ಕ್ಷೇತ್ರದ ಬೆಳ್ಳಳ್ಳಿ ಕ್ರಾಸ್‌ನ ಖಾಸಗಿ ಕನ್ವೆನ್ಷನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಅದರಲ್ಲೂ ಕಂದಾಯ ಇಲಾಖೆಯಂಥ ಪ್ರಮುಖ ಖಾತೆಯ ಸಚಿವರಿರುವ ಕ್ಷೇತ್ರದಲ್ಲಿ ಮೂವತ್ತೈದು ಸಾವಿರಕ್ಕೂ ಹೆಚ್ಚಿನ ಬಹಮತ ನೀಡಿರುವುದು ನಿಜಕ್ಕೂ ಅದ್ಭುತ ಸಾಧನೆ, ಈ ಸಾಧನೆಗಾಗಿ ಶ್ರಮಿಸಿರುವ ಕ್ಷೇತ್ರದ ಬಿಜೆಪಿ ಮುಖಂಡರು, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್‌ಗೌಡರಿಗೆ ಹಾಗೂ ನನ್ನ ನೆಚ್ಚಿನ ಮುಖಂಡರು, ಕಾರ್ಯಕರ್ತರು, ಮತಬಾಂಧವರಿಗೆ ಅಭಾರಿಯಾಗಿರುತ್ತೇನೆ ಎಂದರು.

ಅತಿಶೀಘ್ರದಲ್ಲೇ ರಾಜ್ಯದಲ್ಲಿ ಉಪಚುನಾವಣೆ, ಬಿಬಿಎಂಪಿ ಚುನಾವಣೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು, ಅದರಲ್ಲೂ ಸಹ ನಮ್ಮ ಮೈತ್ರಿ ಪಕ್ಷಗಳು ಇದಕ್ಕಿಂತ ಹೆಚ್ಚಿನ ಗೆಲುವು ಸಾಧಿಸಲು ಸಜ್ಜಾಗಬೇಕಿದೆ. ಈ ಎಲ್ಲಾ ಚುನಾವಣೆಗಳು ಕಾರ್ಯಕರ್ತರ ಚುನಾವಣೆಗಳಾಗಿದ್ದು, ಕಾರ್ಯಕರ್ತರೊಟ್ಟಿಗೆ ಮತಯಾಚನೆಗೆ ಬಂದು ಅವರ ಗೆಲುವಿಗೆ ಶ್ರಮಿಸುತ್ತೇನೆ. ಕೇಂದ್ರದಿಂದ ದೊರೆಯುವ ಅನುದಾನವನ್ನು ತಂದು ಬ್ಯಾಟರಾಯನಪುರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿದರು.

ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತುಗೌಡ, ಹಿರಿಯ ಬಿಜೆಪಿ ಮುಖಂಡರಾದ ತಿಂಡ್ಲು ರಾಜಗೋಪಾಲ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಕೆ.ಎ.ಮುನೀಂದ್ರಕುಮಾರ್, ಬ್ಯಾಟರಾಯನಪುರ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ವೇಣು ಗೋಪಾಲ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಲೋಹಿತ್ ಗೌಡ, ತಿಮ್ಮೇಗೌಡ, ಜಕ್ಕೂರು ವಾರ್ಡ್ ಬಿಜೆಪಿ ಅಧ್ಯಕ್ಷ ಕೆ.ಎ.ಅನಿಲ್, ಬಿಜೆಪಿ ಮುಖಂಡರಾದ ಮುನಿರಾಜು, ದೊಡ್ಡಜಾಲ ಶ್ರೀನಿವಾಸಯ್ಯ, ಮುನಿಹನುಮಯ್ಯ, ಮುನಿಸ್ವಾಮಿ ಒಡೆಯರ್(ಆನಂದ್ ಮಾಸ್ಟರ್), ಕಿರಣ್, ಶ್ರೀಕಂಠಮೂರ್ತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ