ದರ್ಶನ್‌ ಪತ್ನಿ ನಿಂದಕರಿಗೆ ಜೈಲೇ ಗತಿ

KannadaprabhaNewsNetwork |  
Published : Jun 23, 2026, 01:45 AM IST
ದರ್ಶನ್‌ | Kannada Prabha

ಸಾರಾಂಶ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಇದೇ ವೇಳೆ ಆಧಾರರಹಿತ, ಸುಳ್ಳು, ಕ್ಷುಲ್ಲಕ ಮತ್ತು ಬೆದರಿಸುವ ಸಂದೇಶಗಳನ್ನು ಕಳಿಸುವುದನ್ನು ಸಾಮಾಜಿಕ‌ ಜಾಲತಾಣದ ಕಂಪನಿಯೇ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ, ನ್ಯಾಯಾಲಯಗಳು ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದು ಹೇಳಿದೆ.

ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಪ್ರಶಾಂತ್ ತಲ್ವಾರ್, ಬಿ.ಚಂದ್ರಶೇಖರ್ ಮತ್ತು ನಿಂಗರಾಜ್ ಗುಲಾಪ್ಪ ತಲ್ವಾರ್ ಹಾಗೂ ಜಿ.ಬಿ. ನಿತಿನ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ಆದೇಶಿಸಿದೆ.

ಪ್ರಕರಣದ‌ ದೂರುದಾರೆ ವಿಜಯಲಕ್ಷ್ಮೀ ಅವರು 2025ರ ಡಿಸೆಂಬರ್‌ನಲ್ಲಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆರೋಪಿಗಳು ಸಾಮಾಜಿಕ‌ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದಾರೆ. ಮಹಿಳೆಯ ವಿರುದ್ಧ ಇಂತಹ ಕಾಮೆಂಟ್‌ಗಳು ಹಾಕುವುದನ್ನು ಕ್ಷಮಿಸಲಾಗದು. ವಿಜಯಲಕ್ಷ್ಮೀ ವಿರುದ್ಧ ಅರ್ಜಿದಾರರು ಮಾಡಿರುವ ಕಾಮೆಂಟ್ ಗಳು ಮಹಿಳೆಯರ ಬಗ್ಗೆ ಅವರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಪೀಠ ಗಂಭೀರವಾಗಿ ನುಡಿದಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನವು ಕಲ್ಪಿಸಿರುವ ಮೂಲಭೂತ ಹಕ್ಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದಾಗ್ಯೂ, ಅಂತಹ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಸಮಂಜಸವಾದ ನಿರ್ಬಂಧಗಳಿವೆ. ಅಂತಹ ನಿರ್ಬಂಧಗಳನ್ನು ಮೀರುವುದು ಅಥವಾ ಇನ್ನೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವುದು ಖಂಡಿತವಾಗಿಯೂ ಅಪರಾಧವಾಗುತ್ತದೆ‌. ಆ ಅಪರಾಧವನ್ನು ಕಾನೂನಿನ ಪ್ರಕಾರ ವ್ಯವಹರಿಸಲಾಗುತ್ತದೆ ಎಂದು ಪೀಠ ಹೇಳಿದೆ.

ಕೋರ್ಟ್‌ ಮೂಕ ಪ್ರೇಕ್ಷಕನಲ್ಲ:

ಆಧಾರರಹಿತ, ಸುಳ್ಳು, ಕ್ಷುಲ್ಲಕ ಮತ್ತು ಬೆದರಿಸುವ ಸಂದೇಶಗಳನ್ನು ಕಳಿಸುವುದನ್ನು ಆ ಸಾಮಾಜಿಕ‌ ಜಾಲತಾಣದ ಕಂಪನಿಯೇ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ನ್ಯಾಯಾಲಯಗಳು ಸಾಮಾಜಿಕ ಮಾಧ್ಯಮದಲ್ಲಿ ( ಸಾಮಾಜಿಕ ಜಾಲತಾಣ) ಈ ದೇಶದ ಯಾವುದೇ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತಹ ಕಾಮೆಂಟ್‌ಗಳಲ್ಲಿ ಮಾಡಿದಾಗ ಮಧ್ಯಪ್ರವೇಶಿಸಿ ದೇಶದ ನಾಗರಿಕರ ವಿಶ್ವಾಸವನ್ನು ಭದ್ರಪಡಿಸಬೇಕಾಗುತ್ತದೆ. ನ್ಯಾಯಾಲಯಗಳು ಮೂಕ ಪ್ರೇಕ್ಷಕನಲ್ಲ.‌ ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಸಾರ್ವಜನಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ನ್ಯಾಯಾಲಯಗಳು ಹೆಜ್ಜೆ ಹಾಕುತ್ತವೆ ಎಂದು ಪೀಠ ಅಭಿಪ್ರಾಯಪಟ್ಟು ಆರೋಪಿಗಳ ಅರ್ಜಿಗಳನ್ನು ತಿರಸ್ಕರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ‌ ಪೋಸ್ಟ್‌ ಹಾಕಿದವರ ವಿರುದ್ಧ ವಿಜಯಲಕ್ಷ್ಮಿ ನೀಡಿದ್ದ ದೂರಿನ್ವಯ ಸೈಬರ್ ಕ್ರೈಂ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು. ಅವರಿಗೆ ಜಾಮೀನು ನಿರಾಕರಿಸಿ ನಗರದ 45ನೇ ಎಜೆಎಂ ನ್ಯಾಯಾಲಯ ಆದೇಶಿತ್ತು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕೇಗೌಡರ ಸಂಗ್ರಹಿಸಿರುವ ಪುಸ್ತಕಗಳಿಗೆ ಸೂಕ್ತ ಜಾಗ, ಕಟ್ಟಡ ವ್ಯವಸ್ಥೆ: ಸಿಎಂ ಸೂಚನೆ
ಆದಿಚುಂಚನಗಿರಿ ಮಠ ಧರ್ಮ ಪಾರಾಯಣತೆ, ಸಕಾರಾತ್ಮಕ ಶಕ್ತಿ ಹೊಂದಿರುವ ಭೂಮಿ