ಬಳ್ಳಾರಿ ಜೈಲ್‌ಗೆ ದರ್ಶನ್‌ ಶಿಫ್ಟ್‌; ಭದ್ರತೆ ಪರಿಶೀಲನೆ

KannadaprabhaNewsNetwork |  
Published : Aug 28, 2024, 12:49 AM IST
ಬಳ್ಳಾರಿ ಜೈಲ್‌ | Kannada Prabha

ಸಾರಾಂಶ

ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ವಿಚಾರದಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಅಗತ್ಯ ಸಿದ್ಧತೆಯನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲ್‌ಗೆ ಶಿಫ್ಟ್‌ ಮಾಡುವಂತೆ ನ್ಯಾಯಾಲಯ ಆದೇಶಿಸಿದ್ದು, ಇನ್ನು ಮುಂದೆ ಕಿಲ್ಲಿಂಗ್ ಸ್ಟಾರ್‌ಗೆ ಬಿಸಿಲೂರು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿಯೇ ‘ಸೆರೆವಾಸಾತಿಥ್ಯ’ ದೊರೆಯಲಿದೆ.

ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ವಿಚಾರದಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಅಗತ್ಯ ಸಿದ್ಧತೆಯನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ಈಗಾಗಲೇ ಜೈಲಿನ ಸಿಸಿಟಿವಿಗಳನ್ನು ಅಧಿಕಾರಿಗಳು ಪರಿಶೀಲಿಸಿ, ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದಾರೆ. ಜೈಲಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಮೊಬೈಲ್‌ ಜಾಮರ್‌ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ್ದಾರೆ. ಜೈಲ್‌ ಒಳಾಂಗಣದ ಆವರಣದಲ್ಲಿ ಸುತ್ತಲೂ 360 ಡಿಗ್ರಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಿಸಿ ಕ್ಯಾಮರಾ, ಬಿಗಿ ಭದ್ರತೆಯನ್ನು ಕಾರಾಗೃಹಕ್ಕೆ ಒದಗಿಸಲಾಗಿದೆ.

ದರ್ಶನ್ ಬಳ್ಳಾರಿ ಜೈಲಿಗೆ ಬರುತ್ತಿರುವ ಮೊದಲ ಸೆಲೆಬ್ರಿಟಿ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ಈತನನ್ನು ಇಡಲು ಕ್ರಮ ವಹಿಸಲಾಗಿದೆ. ಕೊಠಡಿಗೆ ಹೆಚ್ಚಿನ ಭದ್ರತೆ ಸಹ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜೈಲು ಅಧೀಕ್ಷಕರು ಸಭೆ ನಡೆಸಿ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಿಯಮ, ನೀತಿ ಬಿಟ್ಟು ಹೋಗಬಾರದೆಂದು ಸಂದೇಶ ರವಾನಿಸಿದ್ದಾರೆ. ನ್ಯಾಯಾಲಯದ ಸೂಚನೆ, ಅಧಿಕಾರಿಗಳ ಸಂದೇಶದ ಹೊರತಾಗಿ ಯಾವುದೇ ರೀತಿಯ ಸೌಲಭ್ಯ, ಸವಲತ್ತು ನೀಡುವಂತಿಲ್ಲ, ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ. ಜೈಲಿನಲ್ಲಿ ದರ್ಶನ್‌ ಚಲನವಲನ, ಇನ್ನಿತರರು ಅವರ ಜೊತೆ ಯಾವ ರೀತಿ ಇರುತ್ತಾರೆ ಎಂಬ ಮಾಹಿತಿಯ ಬಗ್ಗೆಯೂ ವಿವರಣೆ ನೀಡಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಆದರೆ, ದರ್ಶನ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುತ್ತಿರುವುದು ಇಲ್ಲಿನ ಜೈಲು ಸಿಬ್ಬಂದಿಗಳಲ್ಲಿ ಆತಂಕ ಮತ್ತು ತಲೆನೋವಿಗೂ ಕಾರಣವಾಗಿದೆ. ಹೈ ಪ್ರೊಫೈಲ್‌ ಹೊಂದಿರುವ ದರ್ಶನ ಪ್ರಕರಣ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನ 9 ಸಿಬ್ಬಂದಿಗಳ ತಲೆದಂಡಕ್ಕೂ ಕಾರಣವಾಗಿದ್ದು, ಎಲ್ಲಾದರೂ ಕಣ್ಣುತಪ್ಪಿ ಅವಘಡ ಸಂಭವಿಸಿದರೆ ನೌಕರಿಗೇ ಕುತ್ತು ಬರುವ ಆತಂಕ ಜೈಲು ಸಿಬ್ಬಂದಿಗಳದ್ದು. ಇನ್ನು ದರ್ಶನ್‌ ಭೇಟಿಗೆ ಹೆಚ್ಚಿನ ಜನ ಬರುವ ಸಾಧ್ಯತೆ ಇರುವುದರಿಂದ ತಲೆಬಿಸಿಯೂ ಆರಂಭವಾಗಿದೆ.

1884ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಕಾರಾಗೃಹ ನಿರ್ಮಿಸಲಾಗಿದೆ. ಭಗತ್‌ಸಿಂಗ್ ಅನುಯಾಯಿಗಳು ಸೇರಿದಂತೆ ಹೊರ ರಾಜ್ಯಗಳ ಅನೇಕ ತೀವ್ರಗಾಮಿ ಹೋರಾಟಗಾರರನ್ನು ಇಲ್ಲಿ ಬಂಧಿಸಲಾಗುತ್ತಿತ್ತು. ಇಲ್ಲಿ ನಟೋರಿಯಸ್ ಕೈದಿಗಳನ್ನು ಇಡಲು 10 ಪ್ರತ್ಯೇಕ ಕೊಠಡಿಗಳಿವೆ. ಜೈಲಿನಲ್ಲಿ 500 ಕೈದಿಗಳನ್ನು ಬಂಧಿಸಿಡಬಹುದಾದ ಸಾಮರ್ಥ್ಯವಿದೆ. ಈ ಜೈಲಿನಲ್ಲಿ ಪುರುಷ ಮತ್ತು ಮಹಿಳಾ ಪ್ರತ್ಯೇಕ ಸೆಲ್‌ಗಳಿವೆ. ಸದ್ಯ 385 ಜನರು ಈ ಜೈಲಿನಲ್ಲಿದ್ದಾರೆ.

ಬಳ್ಳಾರಿ ಜೈಲಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಜೈಲು ಎಂಬ ಖ್ಯಾತಿಯೂ ಇದೆ. ಕಾರಾಗೃಹದಲ್ಲಿದ್ದಾಗ್ಯೂ ಸುಧಾರಿಸದ ರೂಢಾಪರಾಧಿಗಳನ್ನು, ಕೈದಿಗಳನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧೆಡೆ ನಟೋರಿಯಸ್ ರೌಡಿಗಳನ್ನು ಇಲ್ಲಿ ಬಂಧಿಸಿಡಲಾಗುತ್ತಿತ್ತು. ಇದಕ್ಕೆ ಕಾರಣವೂ ಇದೆ. ಬಳ್ಳಾರಿ ಕಡುಬಿಸಿಲಿನ ಊರು. ಸಂಪೂರ್ಣ ಕಲ್ಲಿನ ಕಟ್ಟಡದಿಂದ ನಿರ್ಮಿತವಾಗಿರುವ ಬಳ್ಳಾರಿ ಜೈಲಿನಲ್ಲಿ ಬೇಸಿಗೆ ಕಳೆಯುವುದು ಎಂದರೆ ಕಡು ಕಷ್ಟ. ಹೀಗಾಗಿಯೇ ಬಳ್ಳಾರಿ ಜೈಲು ಎಂದರೆ ಎಂಥವರಿಗೂ ಭಯ.

ಗಲಭೆ, ಕೊಲೆ, ದರೋಡೆ, ಬಾಂಬ್‌ ಸ್ಫೋಟ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳು ಇಲ್ಲಿದ್ದಾರೆ. ರಾಜ್ಯಾದ್ಯಂತ ಗಮನ ಸೆಳೆದಿದ್ದ ಹರ್ಷ ಕೊಲೆ ಪ್ರಕರಣದ ಓರ್ವ ಆರೋಪಿ, ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಹಾಗೂ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದ ಓರ್ವ ಆರೋಪಿ ಸದ್ಯ ಬಳ್ಳಾರಿ ಕಾರಾಗೃಹದ ಬಂಧನದಲ್ಲಿದ್ದಾರೆ.ಬಳ್ಳಾರಿ ಜೈಲಿನಲ್ಲಿ ಅನೇಕ ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಸಿನಿಮಾಗಳ ಶೂಟಿಂಗ್ ಗಳಾಗಿವೆ. ನಟ ಪ್ರಜ್ವಲ್‌, ಹಾಗೂ ದರ್ಶನ್‌ ಅಭಿನಯದ ‘ಚೌಕ’ ಚಲನಚಿತ್ರ ಹಾಗೂ ‘ದ್ಯಾವ್ರೆ’ ಚಿತ್ರದ ಕೆಲ ಭಾಗಗಳನ್ನು ಬಳ್ಳಾರಿ ಕಾರಾಗೃಹದಲ್ಲಿ ಚಿತ್ರೀಕರಿಸಲಾಗಿದೆ. ಆದರೆ, ದರ್ಶನ್ ಬಳ್ಳಾರಿ ಜೈಲಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿಲ್ಲ. ಬೇರೆಡೆ ಚಿತ್ರೀಕರಣ ನಡೆಸಿ ಬಳ್ಳಾರಿ ಜೈಲು ಎಂದು ತೋರಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!