ದರ್ಶನ್‌ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ: ಧನಂಜಯ

KannadaprabhaNewsNetwork | Updated : Jul 12 2024, 09:31 AM IST

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಬಗ್ಗೆ ಪ್ರತಿಕ್ರಿಯಿಸಿರುವ ನಟ ಧನಂಜಯ್, ‘ಆರೋಪಿ ಸ್ಥಾನದಲ್ಲಿ ಇದ್ದವರ ಪರವಾಗಿ ನಾನು ಯಾವಾಗಲೂ ಮಾತನಾಡಿಲ್ಲ. ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಆಗಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ಎಂದಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಬಗ್ಗೆ ಪ್ರತಿಕ್ರಿಯಿಸಿರುವ ನಟ ಧನಂಜಯ್, ‘ಆರೋಪಿ ಸ್ಥಾನದಲ್ಲಿ ಇದ್ದವರ ಪರವಾಗಿ ನಾನು ಯಾವಾಗಲೂ ಮಾತನಾಡಿಲ್ಲ. ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಆಗಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ಎಂದಿದ್ದಾರೆ. 

ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರ್ಶನ್‌ ವಿಚಾರದಲ್ಲಿ ನಾನು ಮೌನವಾಗಿದ್ದೇನೆ ಎಂದರೆ ನಾನು ಅವರ ಪರವಾಗಿದ್ದೇನೆ ಎಂದರ್ಥವಲ್ಲ. ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆಯಾಗಲಿ. ಕಾನೂನು ಮುಂದೆ ಎಲ್ಲರೂ ಒಂದೇ ಎಂದರು. 

‘ಆರೋಪಿಗಳು ನಮ್ಮವರೇ ಆಗಿದ್ದಾಗ, ನಾವು ಏನು ಹೇಳೋಕೆ ಸಾಧ್ಯ? ಹಾಗೇಯೇ ಕೊಲೆ ಆದವರ ಜಾಗದಲ್ಲಿ ನಾವು ಇದ್ದಾಗ ಏನು ಮಾಡೋಕೆ ಸಾಧ್ಯ? ಈ ಪ್ರಶ್ನೆಗಳ ಜಿಜ್ಞಾಸೆಯಲ್ಲಿದ್ದಾಗ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಒಂದು ದುರಂತ ಆಗಿದೆ. ಜೀವ ಹೋಗಿದೆ. ಕೊಲೆಯಾಗಿರುವ ರೇಣುಕಾ ಸ್ವಾಮಿ ಅವರ ತಂದೆ ತಾಯಿ ಮುಖ ನೋಡಿದಾಗ ಬೇಜಾರಾಗುತ್ತದೆ. ಕಾನೂನು ಕೊಡುವ ತೀರ್ಪಿಗೆ ನಾವೆಲ್ಲ ತಲೆಬಾಗಬೇಕಿದೆ’ ಎಂದು ಹೇಳಿದರು

ಒಂದು ಜೀವ ಹೋದಾಗ ಕಾನೂನಾತ್ಮಕವಾಗಿ ಏನೇನು ಆಗಬೇಕೋ ಅದು ಆಗುತ್ತೆ. ಕೊಲೆ ಜಾಗದಲ್ಲಿ ಏನೇನು ಆಗಿದೆಯೋ ಅದೆಲ್ಲಾ ಪೊಲೀಸರಿಗೆ ಗೊತ್ತಿರುತ್ತದೆ. ಕೆಲವೊಂದು ಹೋರಾಟಗಳನ್ನು ಒಂಟಿಯಾಗಿ ಮಾಡಬೇಕು. ನಾವು ಯಾರು ಏನೂ ಹೇಳಕ್ಕೆ ಆಗಲ್ಲ. ಹಾಗೆಯೇ ಜಡ್ಜ್ ಮಾಡಕ್ಕೂ ಆಗಲ್ಲ. ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂಬುದು ನನ್ನ ಸ್ಪಷ್ಟ ನಿಲುವು’ ಎಂದು ತಿಳಿಸಿದರು. ಆದರೆ, ನಮಗೆ ಗೊತ್ತಿರುವವರ ಮೇಲೆ ಇಂಥ ಆರೋಪ ಬಂದಾಗ ಖಂಡಿತ ಬೇಸರ ಆಗುತ್ತದೆ. ಈ ರೀತಿ ಘಟನೆ ನಡೆಯಬಾರದಿತ್ತು ಎನಿಸುತ್ತದೆ. ಆ ಬೇಸರದಲ್ಲಿದ್ದ ನಾನು ಆರಂಭದಲ್ಲಿ ಈ ಪ್ರಕರಣದ ಬಗ್ಗೆ ಎಲ್ಲೂ ಕೂಡ ಮಾತನಾಡಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದರು.

Share this article