ಶಿಕ್ಷಣದ ಹಂತಗಳಲ್ಲಿ ದಾಸ ಸಾಹಿತ್ಯ ಪಠ್ಯವಾಗಲಿ: ಸಿರನೂರಕರ್‌

KannadaprabhaNewsNetwork |  
Published : Oct 19, 2025, 01:00 AM IST
ಫೋಟೋ- ದಾಸ ಸಾಹಿತ್ಯ 2ಕಲಬುರಗಿ ವಿಭಾಗೀಯ ದಾಸ ಸಾಹಿತ್ಯ ಸಮ್ಮೇಳನದ ಸವ್ರಾಧ್ಯಕ್ಷ ಡಾ. ಶ್ರೀನಿವಾಸ ಸಿರನೂರಕರ್‌ ಅವರು ಸಾಂಸ್ಕೃತಿಕ ಮೆರವಣಿಗೆಯಲ್ಲಿ ನಸುನಗುತ್ತಿರುವ ನೋಟ. ಕೃಷ್ಣಾಜಿ, ಮಡಿವಾಳ ಇದ್ದಾರೆ. | Kannada Prabha

ಸಾರಾಂಶ

ಕಾಲಾತೀತ ತತ್ವ, ಬೋಧನೆ, ಸಮಾಜಮುಖಿ ಚಿಂತನೆ, ಜೀವಪರ ಧೋರಣೆ, ವ್ಯಕ್ತಿತ್ವ ಮತ್ತು ಪರಂಪರೆ ನಿರ್ಮಾಣದ ಆಶಯ ಹೊಂದಿರುವ ದಾಸ ಸಾಹಿತ್ಯವನ್ನು ಔಪಚಾರಿಕ ಶಿಕ್ಷಣದ ಎಲ್ಲಾ ಹಂತಗಳಲ್ಲಿಯೂ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ದಾಸ ಸಾಹಿತ್ಯ ಸಂಶೋಧಕ, ಅಂಕಣಕಾರ ಡಾ.ಶ್ರೀನಿವಾಸ ಸಿರನೂರಕರ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಾಲಾತೀತ ತತ್ವ, ಬೋಧನೆ, ಸಮಾಜಮುಖಿ ಚಿಂತನೆ, ಜೀವಪರ ಧೋರಣೆ, ವ್ಯಕ್ತಿತ್ವ ಮತ್ತು ಪರಂಪರೆ ನಿರ್ಮಾಣದ ಆಶಯ ಹೊಂದಿರುವ ದಾಸ ಸಾಹಿತ್ಯವನ್ನು ಔಪಚಾರಿಕ ಶಿಕ್ಷಣದ ಎಲ್ಲಾ ಹಂತಗಳಲ್ಲಿಯೂ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ದಾಸ ಸಾಹಿತ್ಯ ಸಂಶೋಧಕ, ಅಂಕಣಕಾರ ಡಾ.ಶ್ರೀನಿವಾಸ ಸಿರನೂರಕರ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಇಲ್ಲಿನ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮಾಜಿ ಸೈನಿಕ ಶರಣಬಸಪ್ಪ ಆರ್.ಓಗಿ ವೇದಿಕೆಯಲ್ಲಿ ಶನಿವಾರ ನಡೆದ 1 ದಿನದ ಕಲಬುರಗಿ ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಮಾರು ಆರುನೂರು ವರುಷಗಳ ಇತಿಹಾಸವಿರುವ ಕನ್ನಡ ಹರಿದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಗಣಿತ. ಗಾತ್ರ ಮತ್ತು ಗುಣಗಳೆರಡರಲ್ಲೂ ದಾಸ ಸಾಹಿತ್ಯ ತನ್ನ ಹಿರಿಮೆ, ಗರಿಮೆಗಳನ್ನು ಮೆರೆದಿದೆ ಎಂದು ಪ್ರತಿಪಾದಿಸಿದರು.

ಹದಿನೈದನೇ ಶತಮಾನದಲ್ಲಿ ಶ್ರೀಪಾದರಾಯರಿಂದ ಆರಂಭವಾದ ಕನ್ನಡ ದಾಸ ಸಾಹಿತ್ಯ ಕೃಷಿ ಇಂದಿಗೂ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿರುವುದು ಈ ಸಾಹಿತ್ಯದ ತತ್ವ ಮತ್ತು ಸತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ, ಎರಡೂ ಲಭೂತವಾಗಿ ಭಕ್ತಿ ಪ್ರಧಾನವಾದ ಚಳವಳಿಗಳು. ಸಾಮಾಜಿಕ ಸುಧಾರಣೆ, ಮೂಢ ಸಂಪ್ರದಾಯಗಳ ಆಚರಣೆ ಖಂಡನೆ, ವೈಜ್ಞಾನಿಕ-ವೈಚಾರಿಕ ಚಿಂತನೆಗೆ ಒತ್ತು, ಜಾತಿ-ಮತ-ಪಂಥ ಆಧಾರಿತ ಅಸಮಾನತೆಗಳ ನಿರಾಕರಣೆ ವಚನಕಾರರಲ್ಲಿ, ಹರಿದಾಸರಲ್ಲಿ ಕಂಡು ಬರುತ್ತದೆ ಎಂದರು.

ಅದ್ದೂರಿ ಸಾಂಸ್ಕೃತಿಕ ಮೆರವಣಿಗೆ:

ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದಿಂದ ನಡೆದ ಹಿರಿಯ ಸಾಹಿತಿ ಡಾ. ಶ್ರೀನಿವಾಸ ಸಿರನೂರಕರ್ ಸರ್ವಾಧ್ಯಕ್ಷತೆಯಲ್ಲಿ ಕಲಬುರಗಿ ವಿಭಾಗ ದಾಸ ಸಾಹಿತ್ಯ ಸಮ್ಮೇಳನದಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ದಾಸರ ವೇಷಧಾರಿಗಳು ಗಮನ ಸೆಳೆದರು. ಕಸಾಪ ಅದ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಕಸಾಪ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪೂರಕರ್ ನೇತೃತ್ವದಲ್ಲಿ ಸಮ್ಮಳನದ ಗೌರವಾಧ್ಯಕ್ಷರಾದ ಉದ್ಯಮಿ ಕೃಷ್ಣಾಜಿ ಕುಲಕರ್ಣಿ, ಮಡಿವಾಳಪ್ಪ ಅವರನ್ನೊಳಗೊಂಡು ಮಿನಿ ವಿಧಾನಸೌಧದಿಂದ ಕನ್ನಡ ಭವನದ ವರೆಗೆ ಸಮ್ಮೇಳನಾಧ್ಯಕ್ಷ ಡಾ. ಶ್ರೀನಿವಾಸ ಸಿರನೂರಕರ್ ಸಾಂಸ್ಕೃತಿಕ ಮೆರವಣಿಗೆಗೆ ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದೀನ್ ಮುತ್ತವಲ್ಲಿ ಚಾಲನೆ ನೀಡಿದರು.

ಕೆ.ಎಸ್.ಆರ್.ಪಿ. ಸಹಾಯಕ ಕಮಾಂಡೆಂಟ್ ಗುರುನಾಥ, ನಾಧ್ಯಕ್ಷ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ವಾಸುದೇವ ಅಗ್ನಿಹೋತ್ರಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಭಾಗವಹಿಸಿದ್ದರು.

ದಾಸ ಸಾಹಿತ್ಯ ಸಮ್ಮೇಳನದ ಪ್ರಮುಖ ನಿರ್ಣಯಗಳು:

1.ಕನ್ನಡ ಸಾಹಿತ್ಯಕ್ಕೆ ಅಪಾರ ಕಾಣಿಕೆ ನೀಡಿದ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯದ ಅಧ್ಯಯನಕ್ಕೆ ಏಕಕಾಲಕ್ಕೆ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಬೇಕು.

2.ಕಲ್ಯಾಣ ಕರ್ನಾಟಕ ಸಮಗ್ರ ದಾಸ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಕಾರ್ಯ ಕೈಕೊಂಡು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಆಭಿವೃದ್ಧಿ ಮಂಡಳಿ ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ಮೆರೆಯಬೇಕು.

3.ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ ಕಲ್ಯಾಣ ಕರ್ನಾಟಕದ ಪ್ರತಿಭೆಗಳಿಗೆ ಕ್ರಮವಾಗಿ ‘ವಚನ ಸಾಹಿತ್ಯ ರತ್ನ’ ಮತ್ತು ‘ದಾಸ ಸಾಹಿತ್ಯ ರತ್ನ’ ಪ್ರಶಸ್ತಿಗಳನ್ನು ಕೆಕೆಆರ್‌ಡಿಬಿ ಆರಂಭಿಸಬೇಕು

4.ಕನ್ನಡ ದಾಸ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ ಶ್ರೀಪಾದರಾಜರ ಜನ್ಮದಿನವನ್ನು ಅಥವಾ ಅವರ ಪುಣ್ಯದಿನವನ್ನು ಕರ್ನಾಟಕ ಸರ್ಕಾರ ‘ದಾಸ ಸಾಹಿತ್ಯ ದಿನ’ವನ್ನಾಗಿ ಆಚರಿಸುವಂತೆ ಆದೇಶ ಹೊರಡಿಸಬೇಕು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ