ಕನ್ನಡಪ್ರಭ ವಾರ್ತೆ ತುಮಕೂರುಆರ್‌ಎಸ್ಎಸ್ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಪಥಸಂಚಲನ ತುಮಕೂರು ನಗರದಲ್ಲಿ ಯಶಸ್ವಿಯಾಯಿತು.ನಗರದಲ್ಲಿ 2 ಮಾರ್ಗದಲ್ಲಿ ಪಥ ಸಂಚಲನ ನಡೆಯಿತು. ಮೊದಲನೇ ಪಥ ಸಂಚಲನ ಹಳೆ ಡಿಡಿಪಿಐ ಕಚೇರಿ ಮುಂಭಾಗದಿಂದ ಪ್ರಾರಂಭವಾಗಿ ಶಂಕರಮಠ ವೃತ್ತ, ಹೊರಪೇಟೆ ರಸ್ತೆವರೆಗೆ ಸಾಗಿತು. ಎರಡನೇ ಪಥ ಸಂಚಲನ ರ್ಯಾಲಿ ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಗಾಯತ್ರಿ ಚಿತ್ರಮಂದಿರ, ಟೌನ್ ಹಾಲ್ ಮೂಲಕ ಅಶೋಕ ರಸ್ತೆ, ಚರ್ಚ್ ಸರ್ಕಲ್‌ನಲ್ಲಿ ಸಾಗಿ ಜೂನಿಯರ್ ಕಾಲೇಜಿನಲ್ಲಿ ಮುಕ್ತಾಯವಾಯಿತು.ಎರಡು ಪಥಸಂಚಲನಗಳು ರಾಮಪ್ಪ ವೃತ್ತದಲ್ಲಿ ಸಂಗವಾಗಿ ಜೂನಿಯರ್ ಕಾಲೇಜು ಮೈದಾನಕ್ಕೆ ಬರುವ ಮೂಲಕ ಪಥ ಸಂಚಲನ ಮುಕ್ತಾಯವಾಯಿತು. ಪಥಸಂಚಲನದಲ್ಲಿ ತುಮಕೂರು ನಗರ ಶಾಸಕ ಜಿಬಿ ಜ್ಯೋತಿ ಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಸೇರಿದಂತೆ ಸ್ವಯಂ ಸೇವಕರು, ಸಂಘ ಪರಿವಾರದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು.ಪಥ ಸಂಚಲನಕ್ಕೂ ಮುನ್ನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆರ್‌ಎಸ್ಎಸ್ ಗೀತೆ ಮಳಗಿತು. ಆರ್‌ಎಸ್ಎಸ್ ಸಮವಸ್ತ್ರ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದು ಕಾರ್ಯಕರ್ತರು ಹೆಜ್ಜೆ ಹಾಕಿದರು.ಪಥ ಸಂಚಲನದಲ್ಲಿ ಭಾಗಿಯಾಗಿ ಮಾತನಾಡಿದ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ನೂರು ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೃದಯ ತುಂಬಿ ಬಂದಿದೆ. ದೇಶಕ್ಕಾಗಿ ನೂರು ವರ್ಷ ಕೆಲಸ ಮಾಡಿದ ಸಂಘ ಯಾವುದು ಇಲ್ಲ, ದೇಶಭಕ್ತಿಯನ್ನು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.ದೇಶಕ್ಕಾಗಿ ಏನು ನಿರೀಕ್ಷೆ ಮಾಡದೇ ಆರ್‌ಎಸ್ಎಸ್ ಕೆಲಸ ಮಾಡುತ್ತಿದೆ. ನೂರು ವರ್ಷ ಪೂರೈಸಿದ ಸಂದರ್ಭದ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ ನನಗೆ ಜೀವನದಲ್ಲಿ ಅತ್ಯಂತ ಸಂತೋಷದ ಕ್ಷಣ ಎಂದರು.ಆರ್‌ಎಸ್ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಪಿಡಿಓ ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸುರೇಶಗೌಡ ನೂರು ವರ್ಷದಿಂದ ನಿರಂತರವಾಗಿ ಎಲ್ಲಾ ಸರ್ಕಾರದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಶಿಸ್ತು, ದೇಶ ಭಕ್ತಿ ಕಲಿಸಿಕೊಡುತ್ತಿದೆ ಎಂದ ಅವರು ಖರ್ಗೆಯವರಿಗೆ ಏಕೆ ಉರಿ ಬಂದಿದೆ ಅಂತ ಗೊತ್ತಿಲ್ಲ ಎಂದರು.ಇಂದಿರಾ ಗಾಂಧಿಯವರಿಗೆ ಸಂಘವನ್ನು ಬ್ಯಾನ್ ಮಾಡಲು ಆಗಲಿಲ್ಲ, ಅದಾದ ಮೇಲೆ ಜವಹರಲಾಲ್ ನೆಹರು, ರಾಹುಲ್ ಗಾಂಧಿ ಕೈಯಲ್ಲೂ ಆಗಲಿಲ್ಲ. ಇದ್ಯಾವುದೋ ಮರಿ ಪ್ರಿಯಾಂಕ ಖರ್ಗೆ ಎಂದು ಲೇವಡಿ ಮಾಡಿದರು.ಡಿಕೆ ಶಿವಕುಮಾರ್ ಸಿಎಂ ಆಗ್ತೀನಿ ಅಂತಾ ಕೋಟ್ ಒಲಿಸಿಕೊಂಡು ಕೂತಿದ್ದಾರೆ. ಸಿದ್ದರಾಮಯ್ಯ ನಾನು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರಕ್ಕೆ ಗುಂಡಿ ಮುಚ್ಚಕ್ಕೂ ದುಡ್ಡಿಲ್ಲ. ಜನರ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.ಆರ್‌ಎಸ್ಎಸ್ ಸಂಘಟನೆಯಲ್ಲಿ 24 ಶಾಖೆಗಳಿವೆ ಅವೆಲ್ಲವೂ ಎಬಿವಿಪಿ, ಭಜರಂಗದಳ, ವಿಹಿಂಪ ಜೊತೆಗೆ ಬಿಜೆಪಿಯೂ ಇರಬಹುದು. ಶಕ್ತಿ ಇದ್ದರೆ ಬ್ಯಾನ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದ ಅವರು ಕಾಂಗ್ರೆಸ್ ಅನ್ನೇ ಬ್ಯಾನ್ ಮಾಡುವ ಕಾಲ ದೇಶದಲ್ಲಿ ಬರುತ್ತದೆ ಎಂದರು.ಅನುಮತಿ, ಗೊಂದಲ:ಪಥ ಸಂಚಲನಕ್ಕೂ ಮುನ್ನ ಕಾರ್ಯಕ್ರಮ ಆರಂಭವಾದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಜಾಗದ ಬಗ್ಗೆ ಗೊಂದಲ ಉಂಟಾಯಿತು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಬಳಕೆಗಾಗಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಶಾಸಕರ ಪತ್ರವನ್ನು ಸರ್ಕಾರಿ ಕಾಲೇಜು ಪ್ರಾಂಶುಪಾಲರಿಗೆ ವರ್ಗಾವಣೆ ಮಾಡಲಾಗಿತ್ತು.ಪ್ರಾಂಶುಪಾಲರ ಅನುಮತಿಗಾಗಿ ಕೆಲ ಕಾಲ ಕಾಯಬೇಕಾಯಿತು. ಬಳಿ ಪಥ ಸಂಚಲನ ಆರಂಭವಾಯಿತು.