ಕನ್ನಡಪ್ರಭ ವಾರ್ತೆ ತುಮಕೂರುನಗರದ ಕನ್ನಡಭ ವನದಲ್ಲಿ ಎಸ್‌ಐಆರ್ ಜಾರಿ ಕುರಿತು ಸಮಾನ-ವಿರೋಧ ಹೊಂದಿರುವ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ವೆಲ್''''''''ಫೇರ್ ಪಾರ್ಟಿ ಇಂಡಿಯಾ, ಆಮ್ ಆದ್ಮಿ ಪಾರ್ಟಿ, ಬಹುಜನ ಸಮಾಜವಾದಿ ಪಕ್ಷ, ಸರ್ವೋದಯ ಪಕ್ಷ ಹಾಗೂ ರೈತಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿ ದುಂಡುಮೇಜಿನ ಸಭೆ ನಡೆಸಿದವು.ಸಭೆಯಲ್ಲಿ, ಜನಪರ ಹೋರಾಟಗಾರರು, ರಾಜಕೀಯ ಮುಖಂಡರು, ಪಕ್ಷ-ಪ್ರಮುಖರು, ಮಹಿಳಾಪರ, ದಲಿತಪರ, ರೈತಪರ, ಕಾರ್ಮಿಕಪರ ಚಳವಳಿಗಾರರು, ಪ್ರಗತಿಪರರು, ಚಿಂತಕರು, ಬರಹಗಾರ-ಲೇಖಕರು ಮತ್ತು ಪತ್ರಕರ್ತರು ಭಾಗವಹಿಸಿದ್ದರು.ಎಸ್ ಐ ಆರ್ ವಿರೋಧ ಯಾಕೆ ಎಂಬುದನ್ನು ವಿವರವಾಗಿ ವಿಶ್ಲೇಷಿಸುತ್ತಾ ಮಾತನಾಡಿದ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪ್ರಕಾಶ್, ಎಸ್ಐಆರ್ ಮೂಲಕ ಭಾರತ ಚುನಾವಣಾ ಆಯೋಗ ಪರೋಕ್ಷವಾಗಿ ಭಾರತೀಯರ ಪೌರತ್ವದ ಹಕ್ಕನ್ನು ಪ್ರಶ್ನಿಸುತ್ತಿದೆ. ಆ ಅಧಿಕಾರ ಭಾರತ ಚುನಾವಣಾ ಆಯೋಗಕ್ಕಿಲ್ಲ. ಇದನ್ನು ಸುಪ್ರೀಂ ಕೋರ್ಟ್ ಕೂಡ ಚುನಾವಣಾ ಆಯೋಗಕ್ಕೆ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದೆ. ಆದರೂ, ಬಿಹಾರದಲ್ಲಿ ಕಳೆದ ಎರಡು-ಮೂರು ತಿಂಗಳುಗಳ ಹಿಂದೆ ಚುನಾವಣಾ ಆಯೋಗದ ವತಿಯಿಂದ ಪ್ರಾರಂಭಿಸಲಾದ ಈ ಎಸ್ಐಆರ್ ಪ್ರಕ್ರಿಯೆಯನ್ನು ಈಗ ದೇಶದಾದ್ಯಂತ ಪ್ರಾರಂಭಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದರ ಅರ್ಥ ಏನೆಂದರೆ, ಈ ದೇಶದ ಯಾವುದೇ ಒಬ್ಬ ನಾಗರಿಕ ತಾನು ಮತದಾನಕ್ಕೆ ಅರ್ಹನಾಗಿದ್ದರೂ ಕೂಡ, ತನ್ನ ಪೌರತ್ವವನ್ನು ಸಿದ್ಧಪಡಿಸದ ಹೊರತು ಮತ ಚಲಾಯಿಸಲು ಹಕ್ಕುದಾರನಾಗಿರುವುದಿಲ್ಲ ಎಂಬುದಾಗಿದೆ. ಅಂದರೆ, ಪೌರತ್ವ ಹಕ್ಕಿನ ಕಾಯ್ದೆಯನ್ವಯ ಸಲ್ಲಿಸಬೇಕಾದ ದಸ್ತಾವೇಜುಗಳನ್ನು ಈಗ ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಲ್ಲಿಸಿ ಮತ್ತೆ ಹೊಸದಾಗಿ ಮತದಾನದ ಹಕ್ಕನ್ನು ಪಡೆಯಬೇಕಾದ ತುರ್ತು ಈಗ ಒದಗಿಬಂದಿದೆ. ಬಡವರು, ಹಿಂದುಳಿದವರು, ದಲಿತರು, ಆದಿವಾಸಿ-ಅಲೆಮಾರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಹುಪಾಲು ಬಡವರು ಮತ್ತು ಅನಕ್ಷರಸ್ಥರೇ ತುಂಬಿರುವಾಗ ತಮ್ಮ ತಾತ-ಮುತ್ತಾತಂದಿರ ಕಾಲದ ದಸ್ತಾವೇಜುಗಳನ್ನು ಹೊಂದಿರಲು ಅವರಿಂದ ಸಾಧ್ಯವೇ ಇಲ್ಲ ಎಂದರು.ಆದಿವಾಸಿ-ಅಲೆಮಾರಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಮತದಾನದಿಂದ ಹೊರಗಿಡುವ ಬಿಜೆಪಿ ಪಕ್ಷದ ಹಿಡನ್-ಅಜೆಂಡಾವನ್ನೇ ಜಾರಿ ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ. ಇಲ್ಲಿ ಮತದಾರ-ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಮತದಾರ-ಪಟ್ಟಿಯಿಂದ ಹೆಸರುಗಳನ್ನು ಕೈ-ಬಿಡುವುದೇ ಮುಖ್ಯವಾಗಿದೆ. ಒದಗಿಸಲಾಗದ ದಸ್ತಾವೇಜುಗಳನ್ನು ಅಪೇಕ್ಷಿಸುತ್ತಿರುವ ಚುನಾವಣಾ ಆಯೋಗವು, ಬಡವರು ಮತ್ತು ಅಂಚಿನ ಜನರ ಮತದಾನದ-ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಹತ್ತಿದೆ. ಇದು ಬಿಜೆಪಿ ಪಕ್ಷದ ಹಿಡನ್-ಅಹೆಂಡಾ ಜಾರಿಯಷ್ಟೇ ಹೊರತು, ಜನಪರವಾದ ಕೆಲಸವಲ್ಲ ಎಂದರು.ಪ್ರಗತಿಪರ ಚಿಂತಕ ಕೆ ದೊರೈರಾಜು ಮಾತನಾಡಿ, ಬಲಹೀನರು ಮತ್ತು ಬಡವರ ಪರವಾಗಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇವಲ ಉಳ್ಳವರ ಪರ ಮಾಡಿಡುವ ಕುತಂತ್ರ ಕಳೆದ ಒಂದು ದಶಕದಿಂದಲೂ ನಡೆಯುತ್ತಲೇ ಇದೆ. ಇದರ ಮುಂದುವರಿಕೆಯ ಭಾಗವಾಗಿ ಈಗ ಈ ಎಸ್ಐಆರ್ ಜಾರಿ ಮಾಡಲಾಗುತ್ತಿದೆ. ಇದು, ಬಡವರು ಮತ್ತು ಬಲಹೀನರ ಮತದಾನದ ಹಕ್ಕನ್ನು ಕಸಿಯಲು ನೇರವಾಗಿ ಹೂಡಿರುವ ಹುನ್ನಾರವಾಗಿದೆ. ಇದು ಆಗಕೂಡದು ಎಂದಾದರೆ, ನಮ್ಮ ಕರ್ನಾಟಕ ಸರ್ಕಾರ ಇದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿ ಕರ್ನಾಟಕದಲ್ಲಿ ಇದು ಜಾರಿಯಾಗದಂತೆ ಇದನ್ನು ತಡೆಯಬೇಕು. ಹಾಗೂ ಜಾತ್ಯತೀತ ಪಕ್ಷಗಳು ಎಂದು ಹೇಳಿಕೊಳ್ಳುವ ಸಾಫ್ಟ್ ಕೋಮುವಾದಿಗಳು ಚಳಿಬಿಟ್ಟು ಬಹಿರಂಗವಾಗಿ ವಂದು ಇದರ ವಿರುದ್ಧ ಮಾತನಾಡಬೇಕು ಎಂದು ಹೇಳಿದರು.