ಹುಬ್ಬಳ್ಳಿ: ವಿದೇಶಿ ಭಾಷೆಗೆ ಅನುವಾದಗೊಂಡ ಮೊದಲ ಕನ್ನಡದ ಸಾಹಿತ್ಯ ಎಂದರೆ ಅದು ದಾಸ ಸಾಹಿತ್ಯ. ಅದರಲ್ಲಿ ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಎಂಬ ಕೀರ್ತನೆ ಮೊದಲು ಜರ್ಮನ್ ಭಾಷೆಗೆ ಅನುವಾದವಾಯಿತು ಎಂದು ಸಂಶೋಧಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಹೇಳಿದರು.
ಈಗ 40 ಸಂಪುಟದ ದಾಸ ಸಾಹಿತ್ಯ ಪ್ರಕಟವಾಗಿದ್ದು, ಇನ್ನು ನೂರು ಸಂಪುಟವಾಗುವಷ್ಟು ಸಾಹಿತ್ಯವಿದೆ. ಅದನ್ನು ಕಟ್ಟಿ ಪೂಜೆ ಮಾಡದೆ ಸಂಶೋಧಕರ ಕೈಗೆ ನೀಡುವಂತಾಗಲಿ. ಅತಿ ಹೆಚ್ಚು ಭಕ್ತಿ ಸಾಹಿತ್ಯವು ಉಳಿದ ಭಾಷೆಗಿಂತ ಕನ್ನಡದಲ್ಲಿಯೇ ಬಂದಿದೆ. ಸಾಹಿತ್ಯಗಳಲ್ಲಿಯೇ ದಾಸ ಸಾಹಿತ್ಯವು ಶ್ರೇಷ್ಠ ಸಾಹಿತ್ಯವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಕ್ಷಮತಾ ಸಂಸ್ಥೆಯ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ಮಹಾಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಜೀವನ ಮತ್ತು ಸಂದೇಶ ಇಡೀ ಮನುಕುಲಕ್ಕೆ ಉಪಕಾರಿಯಾಗಿವೆ. ಕನಕದಾಸರು, ಪುರಂದರ ದಾಸರು ಹಾಗೂ ಬಸವಣ್ಣನವರಂತಹ ಮಹಾತ್ಮರು ಈ ಮಣ್ಣಿನಲ್ಲಿ ಅವತರಿಸಿದ್ದಾರೆ. ಅವರ ಕೃತಿಗಳ ಲಾಭ ಇಂದಿನ ಯುವಜನತೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕೆಎಂಸಿಯ ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕನಕದಾಸರು ಮತ್ತು ಪುರಂದರ ದಾಸರ ಬದುಕು ಬರಹ ಇವೆರಡರಲ್ಲಿಯೂ ಸಾಮ್ಯತೆ ಇದೆ. ಇಬ್ಬರು ಹಮ್ಮನ್ನು ತೊರೆದು ಸಾಧಿಸಿದ್ದಾರೆ. ಅವರ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದರು.
ಪಿ.ಎಸ್. ಪರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಂಡುರಂಗಚಾರ್ಯ ಜಾಲಿಹಾಳ, ಜೆ. ವೇಣುಗೋಪಾಲಾಚಾರ್ಯ, ಎ.ಸಿ. ಗೋಪಾಲ, ಮನೋಹರ ಪರ್ವತಿ, ಗುರುರಾಜ ಕೌಜಲಗಿ, ಮನೋಜ ಪರ್ವತಿಕರ, ವಿಠ್ಠಲ ಕುಲಕರ್ಣಿ ಸೇರಿದಂತೆ ಹಲವರಿದ್ದರು. ಪತ್ರಕರ್ತ ಗಣಪತಿ ಗಂಗೊಳ್ಳಿ ಸ್ವಾಗತಿಸಿದರು. ಜನುಮೇಜ ಉಮರ್ಜಿ ನಿರೂಪಿಸಿದರು. ವೆಂಕಟೇಶ ದಿವಾಣಜಿ ವಂದಿಸಿದರು.