ದಾಸ, ವಚನ ಸಾಹಿತ್ಯ ಗೋಷ್ಠಿಗಳೇ ಮಾಯ

KannadaprabhaNewsNetwork |  
Published : Mar 25, 2025, 12:49 AM IST
24ುಲು1 | Kannada Prabha

ಸಾರಾಂಶ

ವಚನ ಸಾಹಿತ್ಯ ಮತ್ತು ತತ್ವಪದಗಳನ್ನು ರಚಿಸಿರುವ ಸಾಹಿತಿಗಳು ಈ ತಾಲೂಕಿನಲ್ಲಿದ್ದಾರೆ. ಸಿದ್ದಯ್ಯ ಪುರಾಣಿಕ ಅವರಂಥವರು ಜಿಲ್ಲೆಯಲ್ಲಿ ನೆಲೆಸಿದ್ದರು. ಅನೇಕ ತತ್ವಪದಗಳ ರಚನೆಕಾರರು ಇಲ್ಲಿ ಇದ್ದರು.

ರಾಮಮೂರ್ತಿ ನವಲಿ

ಗಂಗಾವತಿ:

ಸಾಹಿತ್ಯ ಸಮ್ಮೇಳನಗಳಲ್ಲಿ ಸಮಗ್ರವಾಗಿ ವಿಚಾರಗೋಷ್ಠಿ, ತಾಲೂಕಿನಲ್ಲಿ ನಡೆಯುವ ಸ್ಥಳದ ವಿಶೇಷತೆ ಹಾಗೂ ಸ್ಥಳೀಯ ಜ್ವಲಂತ ಸಮಸ್ಯೆಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸುವುದು ಸಾಮಾನ್ಯ. ಆದರೆ, ಗಂಗಾವತಿ ನಗರದಲ್ಲಿ ಮಾ. 27 ಮತ್ತು 28ರಂದು ನಡೆಯುವ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಯಾವುದೇ ಗೋಷ್ಠಿಗಳ ಪ್ರಸ್ತಾಪವೇ ಇಲ್ಲ.

ಗಂಗಾವತಿ ತಾಲೂಕು ದಾಸ ಸಾಹಿತ್ಯದ ತವರೂರು. ಜಗನ್ನಾಥದಾಸರು, ವಿಜಯದಾಸರು, ಕನಕದಾಸರು, ಪುರಂದರದಾಸರು ಸಂಚಾರ ಮಾಡಿದ ಈ ತಾಲೂಕು ದಾಸ ಪರಂಪರೆಯ ಗಟ್ಟಿನೆಲ. ಅಲ್ಲದೇ ಆನೆಗೊಂದಿಯ ಮೋಹನದಾಸರು, ಕುಂಟೋಜಿ ಗ್ರಾಮದ ಗುರುಶೇಷ ವಿಠ್ಠಲರು, ಕನ್ನಡದ ಮೊದಲ ದಾಸ ಮಹಿಳೆ, ಕನಕಗಿರಿ ತಾಲೂಕಿನ ನವಲಿ ಗ್ರಾಮದ ನವಲಿ ರಮಾಬಾಯಿ ಸೇರಿದಂತೆ ಹಲವು ಪ್ರಮುಖರು ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ. ವಚನ ಸಾಹಿತ್ಯ ಮತ್ತು ತತ್ವಪದಗಳನ್ನು ರಚಿಸಿರುವ ಸಾಹಿತಿಗಳು ಈ ತಾಲೂಕಿನಲ್ಲಿದ್ದಾರೆ. ಸಿದ್ದಯ್ಯ ಪುರಾಣಿಕ ಅವರಂಥವರು ಜಿಲ್ಲೆಯಲ್ಲಿ ನೆಲೆಸಿದ್ದರು. ಅನೇಕ ತತ್ವಪದಗಳ ರಚನೆಕಾರರು ಇಲ್ಲಿ ಇದ್ದರು. ಚಿದಾನಂದ ಅವಧೂತರು, ವಿರೂಪಣ್ಣ ತಾತಾ ಹೇರೂರು, ವಡಕಿ ತಾತಾಪಯ್ಯ ಮುಂತಾದವರು ಬಸವಣ್ಣನ ತತ್ವಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ.

ಆದರೆ ಗಂಗಾವತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಗೋಷ್ಠಿಗಳ ಮಾತೇ ಇಲ್ಲ.

ಆಮಂತ್ರಣ ಪತ್ರಿಕೆ ಇನ್ನೂ ಎಲ್ಲ ಅತಿಥಿಗಳು ಮತ್ತು ಸಾಹಿತಿಗಳ ಕೈ ಸೇರಿಲ್ಲ. ಆಮಂತ್ರಣ ಪತ್ರಿಕೆಗಳಲ್ಲಿ ಹೆಸರು ಸೇರಿಸುವವರ ಎಡವಟ್ಟಿನಿಂದಾಗಿ ಗಣ್ಯರು ಹೆಸರು ಏರುಪೇರಾಗಿವೆ. ಕೆಲವು ಸಾಹಿತಿಗಳ ಹೆಸರು ಕೈಬಿಡಲಾಗಿದೆ. ಸಾಹಿತಿಗಳೇ ಅಲ್ಲದವರ ಹೆಸರು ಸೇರಿದ್ದು, ಮತದಾರರ ಪಟ್ಟಿಯಂತೆ ಕಂಡುಬರುತ್ತಿದೆ.

ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಗೋಷ್ಠಿ ಏರ್ಪಡಿಸದೇ ಇರುವುದು ವಿಷಾದನೀಯ.

ಕೆ. ಬಸವರಾಜ ಅಧ್ಯಕ್ಷರು, ಬಸವಕೇಂದ್ರ

ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿರುವುದು. ದಾಸ ಶ್ರೇಷ್ಠರ ಕೊಡುಗೆಗಳ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ ಏರ್ಪಡಿಸದೇ ಇರುವುದು ಸರಿಯಲ್ಲ.

ಗುರುರಾಜ ಬೆಳ್ಳುಬ್ಬಿ, ಸಂಚಾಲಕರು, ಹರಿದಾಸ ಬಳಗ ಗಂಗಾವತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!