ಚಿತ್ರದುರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ರಾಜ್ಯ ಸಮಿತಿ ಬೆಂಗಳೂರು, ಚಿತ್ರದುರ್ಗವತಿಯಿಂದ ಮಾನವತಾವಾದಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕದಸಂಸ ಕಾರ್ಯಕರ್ತರ ರಾಜ್ಯಮಟ್ಟದ ಬೃಹತ್ ಜಾಗೃತಿ ಸಮಾವೇಶ ತರಾಸು ರಂಗಮಂದಿರದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗರೆ ರಂಗಪ್ಪ ತಿಳಿಸಿದರು.
ಮಾಹಿತಿ ನೀಡಿ ಮಾತನಾಡಿದ ಅವರು, ಸಮಾವೇಶವನ್ನು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಉದ್ಘಾಟಿಸುವರು. ರಾಜ್ಯ ಸಂಚಾಲಕರಾದ ಎಂ. ಸೋಮಶೇಖರ್ ಅಧ್ಯಕ್ಷತೆಯನ್ನು ವಹಿಸುವರು. ಮಾಜಿ ಸಚಿವ ಎಚ್.ಆಂಜನೇಯ, ಭಾವಚಿತ್ರಗಳಿಗೆ ಪುಷ್ಪಾರ್ಚನೆ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಉಪನ್ಯಾಸ ನೀಡುವರು. ಪ್ರಸನ್ನ ಜಯಣ್ಣರನ್ನು ಸನ್ಮಾನಿಸಲಾಗುವುದು.ಜಿಲ್ಲಾಧಿಕಾರಿ ಜಿ.ಆರ್.ಜಿ.ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಡಾ. ತಿಪ್ಪೇಸ್ವಾಮಿ, ಜೆ.ಜೆ.ಹಟ್ಟಿ, ಜಿ.ಎಸ್.ಮಂಜುನಾಥ್, ಬಿ.ಪಿ.ಪ್ರಕಾಶ ಮೂರ್ತಿ, ಭಾಗವಹಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿತ್ರದುರ್ಗ ಹಾಗೂ ಕರ್ನಾಟಕ ಜನಸೇವಾ ಸಂಸ್ಥೆ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಬೆಳಗ್ಗೆ 10 ಗಂಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತರಾಸು ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು. ಸಮಾವೇಶದ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ದೀಪ ಕಮಲ ಸಂಗೀತ ಸಂಸ್ಥೆ (ರಿ.) ದಾವಣಗೆರೆ ಕಲಾವಿದವರಿಂದ ಸುಗಮ ಸಂಗೀತ ಹಾಗೂ ಕ್ರಾಂತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.ಜಿಲ್ಲಾ ಸಂಚಾಲಕರಾದ ಜಿ.ಆರ್.ಪ್ರಭಾಕರ್, ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಭೀಮನಕೆರೆ ಉಪಸ್ಥಿತರಿದ್ದರು.