ಕನ್ನಡಪ್ರಭ ವಾರ್ತೆ, ಕೊಪ್ಪ
ಸಮಾಜದಲ್ಲಿ ನಡೆಯುತ್ತಿದ್ದ ಮೌಢ್ಯವನ್ನು ಕುವೆಂಪು ವಿರೋಧಿಸಿದ್ದರು. ಆದರೆ, ದೇವರನ್ನು ನಿರಾಕರಿಸಲಿಲ್ಲ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬೇಕು ಎಂದು ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಮುನಿರಾಜ ರೆಂಜಾಳ ಹೇಳಿದರು.ಕುವೆಂಪು ಹುಟ್ಟೂರಾದ ತಾಲೂಕಿನ ಹಿರೇಕೊಡಿಗೆಯಲ್ಲಿನ ಸಂದೇಶ ಭವನದಲ್ಲಿ ತಾಲೂಕು ಆಡಳಿತ ದಿಂದ ಆಯೋಜಿಸಿದ್ದ ‘ವಿಶ್ವ ಮಾನವ ದಿನಾಚರಣೆ’ಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕುವೆಂಪು ತಾವು ಏನನ್ನು ಹೇಳುತ್ತಿದ್ದರೋ ಅದನ್ನು ಪಾಲಿಸುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದ ಅವರು ಮಂತ್ರ ಮಾಂಗಲ್ಯ ಎಂಬ ಅದ್ಭುತ ಕ್ರಾಂತಿಗೆ ನಾಂದಿ ಹಾಡಿದರು. ಸರಳ ವಿವಾಹದ ಭಾಗವಾಗಿ ಮಂತ್ರ ಮಾಂಗಲ್ಯವನ್ನು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಮೂಲಕ ಅನುಷ್ಠಾನಕ್ಕೆ ತಂದ ಕುವೆಂಪು ಮಾನವ ಧರ್ಮದ ಸಿದ್ಧಾಂತ ಪ್ರತಿಪಾದಿಸಿದರು. ಕುವೆಂಪು ಮೇಲಿನ ಅಭಿಮಾನವೆಂದರೆ ಈ ನೆಲದ ಮೇಲಿನ ಅಭಿಮಾನ’ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕುವೆಂಪು 20ನೇ ಶತಮಾನದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹಾಗೂ ಚಿಂತಕರಾಗಿ ರಸಋಷಿ ಎಂದೇ ಪ್ರಖ್ಯಾತಿ ಪಡೆದಿದ್ದರು. ನಮ್ಮ ಮಲೆನಾಡಿನ ಆಚಾರ ವಿಚಾರ, ಭಾಷಾ ಶೈಲಿ, ಉಡುಗೆ ತೊಡುಗೆ, ಆಹಾರ ಪದ್ಧತಿ, ಸಂಸ್ಕೃತಿಯನ್ನು ಕಾದಂಬರಿಗಳ ಮೂಲಕ ದಾಖಲಿಸಿದ್ದಾರೆ’ ಎಂದ ‘ಕುವೆಂಪು ಕನ್ನಡದ ಹಿರಿಮೆ ಯನ್ನು, ಕನ್ನಡದ ಸಾರಸ್ವತ ಲೋಕ ಮತ್ತು ಸಾಹಿತ್ಯ ಲೋಕ ಪ್ರಪಂಚಕ್ಕೆ ಸಾರಿದ ಅಗ್ರಮಾನ್ಯರು. ರೈತರ ಕಾಯಕವನ್ನು ಹೇಳಿ ಹೊಗಳಿದರು.ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡ ಮಹಾನ್ ಕವಿ. ಕಾಡು, ನಾಡು, ನುಡಿ, ಪ್ರೇಮ, ದೇಶಪ್ರೇಮ, ಪ್ರಕೃತಿ ಇವು ಅವರ ಕಾವ್ಯಗಳ ವಿಚಾರಗಳಾಗಿದ್ದವು. 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು 1968ರಲ್ಲಿ ಜ್ಞಾನಪೀಠ ಪ್ರಶಸ್ತಿ ಮೊದಲ ಬಾರಿ ಕನ್ನಡಕ್ಕೆ ತಂದುಕೊಟ್ಟ ಮಹಾನ್ ಕವಿ ಕುವೆಂಪು ಹುಟ್ಟಿದ ದಿನವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲು ಧರ್ಮಸಿಂಗ್ ನೇತೃತ್ವದ ಸರ್ಕಾರ 2005 ಡಿಸೆಂಬರ್ ನಲ್ಲಿ ಘೋಷಣೆ ಮಾಡಿತು’ ಎಂದರು.
ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ, ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಪಪಂ ಸದಸ್ಯರಾದ ರಶೀದ್, ಮೈತ್ರಾ ಗಣೇಶ್, ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ಮಂಗಳಾ, ಸದಸ್ಯರಾದ ಬಿ.ಜಿ.ರವೀಂದ್ರ, ಬಿ.ಎಸ್.ತ್ರಿಪುರೇಂದ್ರ, ರಾಜೀವಿ, ಕೃಷ್ಣಪ್ಪ, ಸಂಜೋಗ, ರೇಖಾ, ಗ್ರಾಮಸ್ಥರಾದ ರಾಘವೇಂದ್ರ ಭಟ್ ವೇದಿಕೆಯಲ್ಲಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಪುತ್ಥಳಿಗೆ ಶಾಸಕ ಟಿ.ಡಿ.ರಾಜೇಗೌಡ ಮಾಲಾರ್ಪಣೆ ಮಾಡಿದರು. ಸೂರ್ಯ ದೇವಸ್ಥಾನ ಶಾಲಾ ಮಕ್ಕಳು ಕುವೆಂಪು ರಚಿಸಿದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಕೆಡಿಪಿ ಸದಸ್ಯರಾದ ರಾಜಶಂಕರ್, ಬಿ.ಪಿ.ಚಿಂತನ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಂದ್ರ ಮುಂತಾದವರು ಪಾಲ್ಗೊಂಡಿದ್ದರು.