ಹೂವಿನಹಡಗಲಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಕೆಳಗಿನ ತೀರದ ಗ್ರಾಮಗಳಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿದ್ದಕ್ಕೆ ರೈತರು ತಕರಾರು ತೆಗೆಯುತ್ತಿದ್ದು, ಜೆಸ್ಕಾಂ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಹಕ್ಕಂಡಿ ಇನ್ನಿತರ ನದಿ ತೀರದ ಗ್ರಾಮಗಳಲ್ಲಿ ರೈತರು ತಕರಾರು ಮಾಡುತ್ತಿದ್ದಾರೆ. ಇನ್ನು ಕೆಲವೆಡೆಗಳಲ್ಲಿ ಜೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಕಂಬಗಳನ್ನು ಹತ್ತಲು ಬಿಟ್ಟಿಲ್ಲ. ರೈತರು ಹಾಗೂ ಜೆಸ್ಕಾಂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೆಲಸಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.
ನದಿ ತೀರದ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲು ರೈತರು ತೊಂದರೆ ಉಂಟು ಮಾಡುತ್ತಿದ್ದಾರೆ. ಆದರಿಂದ ನಮಗೆ ಅಗತ್ಯ ಪೊಲೀಸ್ ಸಿಬ್ಬಂದಿ ಕೊಡಬೇಕಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಹಸೀಲ್ದಾರ್‌ಗೆ ಶನಿವಾರ ಪತ್ರ ಬರೆದಿದ್ದಾರೆ.ಬರ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ 4 ತಿಂಗಳು ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಈಗಿರುವ ನದಿಯಲ್ಲಿನ ನೀರು ಸಂಪೂರ್ಣ ಬಳಕೆಯಾದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಆ ಕಾರಣಕ್ಕಾಗಿ ಈ ಹಿಂದೆಯೇ ಈ ಬಾರಿ ನದಿ ನೀರು ಬಳಸಿಕೊಂಡು, 2ನೇ ಬೆಳೆಯನ್ನು ಬೆಳೆಯಬಾರದೆಂದು ನದಿ ತೀರದ ಗ್ರಾಮ ಪಂಚಾಯಿತಿಯಿಂದ ಡಂಗೂರ ಸಾರಿ, ರೈತರಿಗೆ ಮಾಹಿತಿ ನೀಡಿದ್ದೇವೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಜೆಸ್ಕಾಂ ಅಧಿಕಾರಿಗಳು ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ್ ಕೆ. ಶರಣಮ್ಮ ಹೇಳಿದರು.
ಜಿಲ್ಲಾಡಳಿತದ ಆದೇಶದ ಮೇರೆಗೆ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ರಾಜವಾಳ ನವಲಿ ಭಾಗದಲ್ಲಿ 70ರಿಂದ 75 ಮೋಟಾರ್‌ಗಳ ಸಂಪರ್ಕವನ್ನು ಸ್ಥಗಿತಗೊಳಿಸಿದ್ದೇವೆ. ರೈತರು ಗಲಾಟೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೀಡಬೇಕು ಎಂದು ತಾಲೂಕು ಆಡಳಿತಕ್ಕೆ ಪತ್ರ ಬರೆದಿದ್ದೇವೆ ಎಂದು ಜೆಸ್ಕಾಂ ಎಇಇ ಕೇದಾರನಾಥ ಹೇಳಿದರು.