ಉಪ ನೋಂದಣಿ ಕಚೇರಿ ಬದಲಾವಣೆಗೆ ದಸಂಸ ಆಗ್ರಹ

KannadaprabhaNewsNetwork | Published : Jan 30, 2024 2:00 AM

ಸಾರಾಂಶ

ಒಂದೇ ಸೂರಿನಡಿ ಎಲ್ಲಾ ಇಲಾಖೆಯೂ ಕೆಲಸ ಮಾಡಲಿ ಎಂದು ಬೃಹತ್ ಕಟ್ಟಡವನ್ನು ಕಟ್ಟಿದ್ದರು. ಉಪನೋಂದಣಿ ಕಚೇರಿ, ಸಿಡಿಪಿಒ ಕಚೇರಿ ಮತ್ತು ಅಬಕಾರಿ ಕಚೇರಿಗೆ ಮಿನಿ ವಿಧಾನಸೌಧದಲ್ಲಿ ಕಟ್ಟಡವನ್ನು ಕಾಯ್ದಿರಿಸಿದ್ದರು. ಅಲ್ಲಿಗೆ ಇಲಾಖೆಗಳನ್ನ ಸ್ಥಳಾಂತರ ಮಾಡದೇ ಖಾಸಗಿ ಕಟ್ಟಡಗಳಲ್ಲಿ ಸಾವಿರಾರು ರೂ ಬಾಡಿಗೆ ಹಣ ನೀಡಿ ಸಾರ್ವಜನಿಕ ಹಣವನ್ನು ಖಾಸಗಿಯವರ ಪಾಲುಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ತಾಲೂಕಿನ ಆಡಳಿತ ಸೌಧದ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ತಾಲೂಕು ಆಡಳಿತ ವಿರುದ್ಧ ಧರಣಿ ನಡೆಸಿದರು.

ಈ ವೇಳೆ ದಸಂಸ ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ ಮಾತಾನಾಡಿ, ಒಂದೇ ಸೂರಿನಡಿ ಎಲ್ಲಾ ಇಲಾಖೆಯೂ ಕೆಲಸ ಮಾಡಲಿ ಎಂದು ಬೃಹತ್ ಕಟ್ಟಡವನ್ನು ಕಟ್ಟಿದ್ದರು. ಉಪನೋಂದಣಿ ಕಚೇರಿ, ಸಿಡಿಪಿಒ ಕಚೇರಿ ಮತ್ತು ಅಬಕಾರಿ ಕಚೇರಿಗೆ ಮಿನಿ ವಿಧಾನಸೌಧದಲ್ಲಿ ಕಟ್ಟಡವನ್ನು ಕಾಯ್ದಿರಿಸಿದ್ದರು. ಅಲ್ಲಿಗೆ ಇಲಾಖೆಗಳನ್ನ ಸ್ಥಳಾಂತರ ಮಾಡದೇ ಖಾಸಗಿ ಕಟ್ಟಡಗಳಲ್ಲಿ ಸಾವಿರಾರು ರೂ ಬಾಡಿಗೆ ಹಣ ನೀಡಿ ಸಾರ್ವಜನಿಕ ಹಣವನ್ನು ಖಾಸಗಿಯವರ ಪಾಲುಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್ ವ್ಯವಸ್ಥೆ ಸಮಸ್ಯೆಗಳ ಆಗರವಾಗಿ ಮಕ್ಕಳು ದಿನನಿತ್ಯಯಾತನೆ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟ ತಿಂಡಿ ನೀಡುತ್ತಿಲ್ಲ. ನೀಡುತ್ತಿರುವ ಊಟ ತಿಂಡಿಯೂ ಅತ್ಯಂತ ಕಳಪೆ ಗುಣಮಟ್ಟದ್ದು ಮತ್ತು ವಾರ್ಡನ್ ಗಳು ಸರಿಯಾಗಿ ಹಾಸ್ಟೆಲ್ನಿರ್ವಹಿಸದೇ ಮಕ್ಕಳ ವಿದ್ಯಾಭ್ಯಾಸದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.

ಕಂದಾಯ ಇಲಾಖೆಯಲ್ಲಿ ಸಾಗುವಳಿ ಮತ್ತು ಖಾತೆ ವೈಗೈರೆ ಮಾಡದೇ ವಿನಃ ಕಾರಣ ಜನರನ್ನು ಪ್ರತಿನಿತ್ಯ ಅಲೆಸುತ್ತಿದ್ದಾರೆ. ಅದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು 20 ದಿನದೊಳಗೆ ಸರಿಪಸದಿದ್ದರೇ ಮತ್ತೆ ಬೃಹತ್ ಹೋರಾಟ ರೂಪಿಸಿ ಸರ್ಕಾರದ ಗಮನ ಸೆಳೆಯುತ್ತೆವೆ ಎಂದು ಅವರು ತಿಳಿಸಿದರು.

ಬಳಿಕ ಮಾತಾನಾಡಿದ ಪ್ರಗತಿಪರ ಮುಖಂಡ ಅಕ್ಬರ್ ಪಾಷ, ಜನರ ಕೆಲಸ ಮಾಡಬೇಕಾದ ಅಧಿಕಾರಿಗಳು ಇಂದು ಜನರನ್ನು ಹಣಕ್ಕಾಗಿ ಸುಲಿದು ಸಿಪ್ಪೆ ಮಾಡಿ ಪ್ರಾಣಿಗಳ ಹಾಗೆ ಕಚೇರಿಗೆ ಅಲೆಸುತ್ತಿದ್ದಾರೆ. ಜನಸಾಮಾನ್ಯರ ಸ್ಥಿತಿ ನೋಡಿ ಅಯೋ ಅನ್ನಿಸುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಪ್ರತಿಭಟನೆ ಕುರಿತು ಹಿರಿಯ ಮುಖಂಡ ಚಾ. ನಂಜುಂಡಮೂರ್ತಿ, ಮಲ್ಲಿಕಾರ್ಜುನ, ಮಾದಾಪುರ ಕುಮಾರಸ್ವಾಮಿ, ರೈತ ಮುಖಂಡ ಮಹದೇವ ನಾಯ್ಕ, ಚಂದ್ರಶೇಖರ, ವಿಠಲ್ ನಾಣಚಿ, ಮಲಿಯಯ್ಯ. ಆನಗಟ್ಟಿ ದೇವರಾಜ್, ಪುಟ್ಟಮಾದು, ಗೋಪಾಲ್, ನೂರಲಕುಪ್ಪೆ ಶಿವಣ್ಣ, ವಡ್ಡರಗುಡಿ ಚಿಕ್ಕಣ್ಣ, ಮಾಲಿಂಗಯ್ಯ, ಸವ್ವೆ ಸಿದ್ದಯ್ಯ, ಸಣ್ಣಸ್ವಾಮಿ, ಆಕಾಶ್, ನಾಗಮ್ಮ, ದೇವಮ್ಮ, ಚೆನ್ನಜಾಮ್ಮ ಮೊದಲಾದವರು ಇದ್ದರು.

ನಂತರ ಮನವಿ ಸ್ವೀಕರಿಸಿದ ತಹಸೀಲ್ದಾರ ಶ್ರೀನಿವಾಸ್ ನನ್ನ ಹಂತದಲ್ಲಿ ಆಗುವಂತ ಕೆಲವು ಕೆಲಸ ಬಗೆಹರಿಸುತ್ತೇನೆ. ಉಳಿದವುಗಳನ್ನು ಸರ್ಕಾರಕ್ಕೆ ಕಳಿಸುತ್ತೆನೆ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ವಿವಿಧ ದಲಿತ ಪರ ಸಂಘಟನೆಯ ಮತ್ತು ಪ್ರಗತಿಪರ ಸಂಘಟನೆ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

Share this article