ಬಳ್ಳಾರಿ: ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಎಸ್.ವಿಘ್ನೇಶ್ ಹಾಗೂ ಜಿಲ್ಲಾ ಸಂಚಾಲಕ ಜಿ.ಗೋವರ್ಧನ ಮಾತನಾಡಿ, ಶೋಷಿತ ಸಮುದಾಯಗಳ ಹಿತ ಕಾಯುವ ದೃಷ್ಟಿಯಿಂದ ನ್ಯಾಯಾಲಯ ನೀಡಿರುವ ತೀರ್ಪನ್ನು ಕೂಡಲೇ ಅನುಷ್ಠಾನಕ್ಕೆ ಮುಂದಾಗಬೇಕು. ದಸಂಸ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನವಾದ ಜೂ.9ನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಪ್ರೊ.ಕೃಷ್ಣಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು. ಬಾಕಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸರ್ಕಾರದ ಎಲ್ಲ ಹೊಸ ನೇಮಕಾತಿಗಳನ್ನು ತಡೆ ಹಿಡಿಯಬೇಕು ಎಂದರು.
ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಜಿಲ್ಲಾ ಪ್ರಮುಖರಾದ ಫೋಟೋರಾಜ, ನಿಂಗಪ್ಪ ಐಹೊಳೆ, ಎ.ನಾಗರಾಜ್, ಎಚ್.ಜಡೆಪ್ಪ, ಎಚ್.ವೀರಭದ್ರಪ್ಪ, ಡಿ.ನಟರಾಜ್, ಕೆ.ಮುರುಳಿಮೋಹನ್, ಅರುಣ್ ಕುಮಾರ್, ಎಚ್.ವೆಂಕಟೇಶ್, ವೆಂಕಟೇಶ್ ಕುಡಿತಿನಿ, ಹೊನ್ನೇಶ್ ಗೋನಾಳ್, ರಾಮಕೃಷ್ಣಹೆಗಡೆ, ಮಲ್ಲಪ್ಪ, ಗುರುದೇವ, ಲಕ್ಷ್ಮಿಪತಿ, ಎಚ್.ದುರುಗಪ್ಪ ಸೇರಿದಂತೆ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು ಭಾಗವಹಿಸಿದ್ದರು.
ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬಳ್ಳಾರಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.