ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, 15ರಂದು ಬೆಳಗ್ಗೆ 9 ರಿಂದ 10 ಗಂಟೆ ವರೆಗೆ ಮಾನವ ಸರಪಳಿ ಆಯೋಜಿಸಬೇಕಿದೆ. ಆ ನಿಟ್ಟಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಸರ್ಕಾರವು ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಮಾನವ ಸರಪಳಿ ಏರ್ಪಡಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಸಂಪಾಜೆಯಿಂದ ಶಿರಂಗಾಲ ಬಳಿಯ ಗಡಿ ಪ್ರದೇಶದವರೆಗೆ ಮಾನವ ಸರಪಳಿ ಏರ್ಪಡಿಸಬೇಕಿದೆ. ಆ ದಿಸೆಯಲ್ಲಿ ಆಯಾಯ ಗ್ರಾಮ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಎಲ್ಲರೂ ಪಾಲ್ಗೊಂಡು ಸಹಕರಿಸುವಂತೆ ಮನವಿ ಮಾಡಿದರು.15ರಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಒಂದು ಗಂಟೆ ಕಾರ್ಯಕ್ರಮ ಇರಲಿದೆ. ಜಿಲ್ಲೆಯಲ್ಲಿ ಸಂಪಾಜೆಯಿಂದ ಶಿರಂಗಾಲ ಬಳಿಯ ಗಡಿ ಪ್ರದೇಶದವರೆಗೆ ಸುಮಾರು 77 ಕಿ.ಮೀ. ಮಾನವ ಸರಪಳಿ/ ರಿಲೇ ನಡೆಯಲಿದೆ. ಆ ನಿಟ್ಟಿನಲ್ಲಿ ಪ್ರತೀ 100 ಮೀ.ಗೆ ಒಬ್ಬರಂತೆ ವಿಭಾಗಾಧಿಕಾರಿ, ಪ್ರತೀ ಒಂದು ಕಿ.ಮೀ.ಗೆ ಒಬ್ಬರಂತೆ ಪ್ರದೇಶ ಅಧಿಕಾರಿ, 3 ರಿಂದ 5 ಕಿ.ಮೀ.ವರೆಗೆ ಒಬ್ಬರಂತೆ ತಾಲೂಕು ಮಟ್ಟದ ಅಧಿಕಾರಿ ಜೊತೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಗೆ ಸಾಕಷ್ಟು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದು ವೆಂಕಟ್ ರಾಜಾ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿ, ಜಿಲ್ಲೆಯ ಸಂಪಾಜೆಯಿಂದ ಶಿರಂಗಾಲ ಗಡಿ ಪ್ರದೇಶದವರೆಗೆ 12 ಗ್ರಾಮ ಪಂಚಾಯಿತಿಗಳು, 1 ನಗರಸಭೆ, 1 ಪುರಸಭೆ ಬರಲಿದ್ದು, ಆಯಾಯ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ, ಗ್ರಾಮ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಎಲ್ಲರೂ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸುವಂತೆ ಕೋರಿದರು.