ಕನ್ನಡಪ್ರಭ ವಾರ್ತೆ ಬೀಳಗಿ
ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೋಲು-ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ವೃದ್ಧಿ, ಆರೋಗ್ಯಕರ ಚೈತನ್ಯ ಬರಲಿದೆ ಎಂದು ವಿಧಾನ ಪರಿಷತ್ ಶಾಸಕ ಹಣಮಂತ ಆರ್.ನಿರಾಣಿ ಹೇಳಿದರು.ಇಲ್ಲಿನ ಹೊಲಿಸೆಂಟ್ ಪ.ಪೂ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಗೆಲ್ಲಲೇಬೇಕು ಎಂಬ ಆಸೆಯಿಂದ ಛಲದಿಂದ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶನ ಮಾಡುವುದು ಮುಖ್ಯ. ಇಂದಿನ ಸೋಲು ಮುಂದೆ ಗೆಲುವಿನ ಸೋಪಾನ ಎಂದರು.ಶಾಲೆ ಕಾಲೇಜುಗಳಲ್ಲಿ ಪಠ್ಯದೊಂದಿಗೆ ಪಠ್ಯೇತರ ವಿಷಯಗಳಿಗೂ ಆದ್ಯತೆ ನೀಡುವಂತಾಗಬೇಕು. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಿದರೆ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಂಘ-ಸಂಸ್ಥೆಗಳು ಸೇರಿದಂತೆ ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿದ ಹೊಲಿಸೆಂಟ್ ಸಂಸ್ಥೆಯ ಅಧ್ಯಕ್ಷ ಎ.ಎಂ.ಸೋಲಾಪೂರ ದಂಪತಿಗಳ ಪರಿಶ್ರಮ ಅಪಾರವಾಗಿದೆ. ಬೀಳಗಿ ಪಟ್ಟಣದ ಒಂದು ಕೋಣೆಯಲ್ಲಿ ಪ್ರಾರಂಭವಾದ ಹೊಲಿಸೆಂಟ್ ಶಿಕ್ಷಣ ಸಂಸ್ಥೆ ಇಂದು ಪದವಿ ಪೂರ್ವ ಕಾಲೇಜು ವರಿಗೂ ಬೆಳೆದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಇಂದು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇರುವಂತೆ ಮಾಡಿದ್ದು ಜಿಲ್ಲೆಯ ಜನತೆಗೆ ಸಂತಸದ ವಿಷಯ. ಸೋಲಾಪೂರ ಕುಟುಂಬ ನಿರಂತರವಾಗಿ ಗುಣಾತ್ಮಕ ಶಿಕ್ಷಣ ನೀಡುವುದರ ಮೂಲಕ ಪ್ರತಿ ಸಲದ ಫಲಿತಾಂಶದಲ್ಲಿ ಶೇ.೧೦೦ರಷ್ಟು ಫಲಿತಾಂಶ ಈ ಸಂಸ್ಥೆಗೆ ಬರುವಂತೆ ಮಾಡುತ್ತಿದ್ದಾರೆ. ಸದ್ಯ ಪದವಿ ಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿ ಸಂಸ್ಥೆಯೂ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಮುಂಚೂಣಿಯಲ್ಲಿ ಸಾಗಿದೆ ಎಂದು ತೋರಿಸಿದ್ದಾರೆ ಎಂದರು.ವಿಶ್ರಾಂತ ದೈಹಿಕ ಶಿಕ್ಷಕ ಶಿವಾನಂದ ಎಚ್.ಯಾಳವಾರಮಠ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಕ್ರೀಡಾಭಿಮಾನಿಗಳು ಇದ್ದಾರೆ. ಹಲವು ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಧಿಸಿ ತೋರಿಸಿದ್ದಾರೆ. ಅಂತವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.
ಹೊಲಿಸೆಂಟ್ ಕಾಲೇಜಿನ ಅಧ್ಯಕ್ಷ ಎ.ಎಂ.ಸೋಲಾಪೂರ, ಬಸೀತ ಸೋಲಾಪೂರ, ಪಪಂ ಸದಸ್ಯರಾದ ಅಜ್ಜು ಬಾಯಿಸರ್ಕಾರ, ದೈಹಿಕ ಶಿಕ್ಷಣಾಧಿಕಾರಿ ಸಂಗಪ್ಪ ಎತ್ತಿನಮನಿ, ತಾಲೂಕು ಕ್ರೀಡಾ ಸಂಯೋಜಕ ಸಿಕಂದರ ಹವಾಲ್ದಾರ, ಸಂಸ್ಥೆಯ ಕಾರ್ಯದರ್ಶಿ ಎ.ಎ.ಸೋಲಾಪೂರ, ನೂರಲಿ ತಹಸೀಲ್ದಾರ, ಹೊಲಿಸೆಂಟ್ ಪ.ಪೂ ಕಾಲೇಜಿನ ಪ್ರಾಂಶುಪಾಲ್ ಬಿ.ಎ.ಭಿಕ್ಷಾವತಿಮಠ, ನಿರಾಣಿ ಕಾಲೇಜು ಪ್ರಾಂಶುಪಾಲ್ ಬಡಿಗೇರ, ದೈಹಿಕ ಶಿಕ್ಷಕರಾದ ಮುತ್ತೂರ ಹಾಗೂ ಇನ್ನೂ ಅನೇಕರು ಇದ್ದರು.--
ಕೋಟ್ಮಕ್ಕಳಲ್ಲಿರುವ ನೈಜ ಪ್ರತಿಭೆ ಗುರುತಿಸುವ ಕೆಲಸ ಶಾಲಾ ಮಟ್ಟದಲ್ಲಿ ಆಗಬೇಕು. ಅವರು ಮುಂದೆ ಜಿಲ್ಲಾ, ರಾಜ್ಯ, ಅಂತರ ರಾಜ್ಯ, ದೇಶ ವಿದೇಶಗಳ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಕ್ರೀಡೆಯಲ್ಲಿ ಪಾಲ್ಗೊಂಡ ನಿರ್ಣಾಯಕರು ನಿರ್ಣಯ ಕೊಡುವಲ್ಲಿ ಯಾವುದೇ ತಾರತಮ್ಯ ಮಾಡದೇ ನಿರ್ಣಯ ಕೊಡಬೇಕು.
-ಶಿವಾನಂದ ಎಚ್.ಯಾಳವಾರಮಠ ವಿಶ್ರಾಂತ ದೈಹಿಕ ಶಿಕ್ಷಕ