ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಮತ್ತೆ ಚಾಲನೆ?

KannadaprabhaNewsNetwork |  
Published : Sep 13, 2024, 01:41 AM IST
465 | Kannada Prabha

ಸಾರಾಂಶ

ಬ್ರಿಗೇಡ್‌ಗೆ ಮತ್ತೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ವಿಜಯಪುರದಲ್ಲಿ ಸಭೆ ನಡೆಸಲಾಗುವುದು. ಬಳಿಕ ಬೆಂಗಳೂರಲ್ಲಿ ರಾಜ್ಯಮಟ್ಟದಲ್ಲಿ ಸಮಾವೇಶ ನಡೆಸೋಣ ಈಶ್ವರಪ್ಪ ಬೆಂಬಲಿಗರಿಗೆ ಹೇಳಿದ್ದಾರೆ.

ಹುಬ್ಬಳ್ಳಿ:

ಬಿಜೆಪಿಯಿಂದ ಮುನಿಸಿಕೊಂಡು ಲೋಕಸಭಾ ಚುನಾವಣೆ ಸ್ಪರ್ಧಿಸಿ ಪರಾಭವಗೊಂಡಿರುವ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ, ಇದೀಗ ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಹಾಗೂ ಹಿಂದ್‌ ಸಂಘಟನೆಗೆ ಚಾಲನೆ ನೀಡಲಿದ್ದಾರೆ.

ಈ ಸಂಬಂಧ ನಗರದ ವರೂರ್‌ ಕ್ರಾಸ್‌ ಬಳಿಯಿರುವ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ಸಂಘಟನೆಗೆ ಮರುಚಾಲನೆ ನೀಡಲು ಸಹಮತಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೆ. 22ರಂದು ವಿಜಯಪುರದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲಿಯೇ ಎರಡು ಜಿಲ್ಲೆಗಳ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ. ಬಳಿಕ ಬೆಂಗಳೂರಲ್ಲಿ ರಾಜ್ಯಮಟ್ಟದ ಸಭೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರಲ್ಲಿ ನಡೆಯಲಿರುವ ಸಭೆ ಬಗ್ಗೆ 22ರಂದು ನಡೆಯಲಿರುವ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತಿದೆ.

ಈಶ್ವರಪ್ಪ ಬಿಜೆಪಿ ಬಿಟ್ಟಿದ್ದಾರೆ. ಅವರನ್ನು ನಂಬಿಕೊಂಡು ಕೆಲ ಮುಖಂಡರು ಬೆಂಬಲಿಸಿದ್ದರು. ಇದಲ್ಲದೇ, ಈ ಹಿಂದೆ ಈಶ್ವರಪ್ಪ ಬ್ರಿಗೇಡ್‌ ಸ್ಥಾಪಿಸುವಾಗ ಹಲವು ಬೆಂಬಲಿಗರು ಅವರೊಂದಿಗೆ ಗುರುತಿಸಿಕೊಂಡಿದ್ದರು. ಅವರ ಬೆಂಬಲಿಗರಲ್ಲಿ ಕೆಲವರಿಗೆ ಯಾವುದೇ ಸ್ಥಾನಮಾನಗಳೂ ಇಲ್ಲ. ಯಾವುದೇ ಸಂಘಟನೆಗಳಲ್ಲೂ ಇಲ್ಲ. ಅವರೆಲ್ಲರೂ ಇದೀಗ ನಡುನೀರಲ್ಲಿ ಇದ್ದಂತಾಗಿದೆ. ಆದಕಾರಣ ಅವರ ಬೆಂಬಲಿಗರಿಗೆ ರಾಜಕೀಯ ಪಕ್ಷ ಇಲ್ಲದಿದ್ದರೂ ತಮ್ಮದೇ ಸಂಘಟನೆಯಲ್ಲಿ ಸ್ಥಾನ ಸಿಕ್ಕರೆ ಹೋರಾಟ ನಡೆಸಲು ಅನುಕೂಲವಾಗುತ್ತದೆ. ಆದಕಾರಣ ಬ್ರಿಗೇಡ್‌ ಹಾಗೂ ಹಿಂದ್‌ ಸಂಘಟನೆಯನ್ನು ಮತ್ತೆ ಚಾಲನೆ ನೀಡಿ ಆ ಮೂಲಕ ಹೋರಾಟಗಳನ್ನು ರೂಪಿಸಬೇಕು. ಯಾವುದೇ ಕಾರಣಕ್ಕೂ ಸಂಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ಬಳಿಕ ಮಾತನಾಡಿದ ಈಶ್ವರಪ್ಪ, ನಿಮ್ಮೊಂದಿಗೆ ಸದಾಕಾಲ ಇರುತ್ತೇನೆ. ಬ್ರಿಗೇಡ್‌ಗೆ ಮತ್ತೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ವಿಜಯಪುರದಲ್ಲಿ ಸಭೆ ನಡೆಸಲಾಗುವುದು. ಬಳಿಕ ಬೆಂಗಳೂರಲ್ಲಿ ರಾಜ್ಯಮಟ್ಟದಲ್ಲಿ ಸಮಾವೇಶ ನಡೆಸೋಣ. ಪ್ರತಿಜಿಲ್ಲೆಯಿಂದ ಕನಿಷ್ಠವೆಂದರೂ 200-300 ಜನ ಬೆಂಬಲಿಗರು ಬೆಂಗಳೂರಿನ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳೋಣ. ಬ್ರಿಗೇಡ್‌ ಮತ್ತೆ ಕಟ್ಟಿ ಬೆಳೆಸೋಣ ಎಂದರು. ಸಮಾಜದ ಹಿತಕ್ಕಾಗಿ ಈ ಸಂಘಟನೆ ಬಳಸೋಣ ಎಂದು ನುಡಿದರು. ಇದಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಬೆಂಬಲಿಸಿದರು ಎಂದು ಮೂಲಗಳು ತಿಳಿಸಿವೆ.ಸಭೆಯಲ್ಲಿ ಮುಖಂಡರಾದ ಮುಕುಡಪ್ಪ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಸಿದ್ದು ತೇಜಿ, ಶಿವಾನಂದ ಮುತ್ತಣ್ಣವರ, ಕಾಶಿನಾಥ್ ಹುಡೇದ್, ವೀರಣ್ಣ ಹಳೆಗೌಡರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ