ಬಳ್ಳಾರಿ: ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು. ಮನುಷ್ಯ ಸೇರಿದಂತೆ ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಯಾರು ಕಸಿದುಕೊಳ್ಳಬೇಡಿ ಎಂದು ಪದ್ಮಶ್ರೀ ಪುರಸ್ಕೃತ ಕಲಾವಿದೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.
ಸಮಾಜದಲ್ಲಿ ನಾವು ಹೀಗೆ ಆಗಬೇಕು. ಹೀಗೆ ಹುಟ್ಟಬೇಕು ಎಂದು ಯಾರಿಗೂ ಗೊತ್ತಾಗುವುದಿಲ್ಲ. ನಾನು ಹೆಣ್ಣಾಗಿ ಪರಿವರ್ತನೆಯಾಗಿ ಸಮಾಜದಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸಿದ್ದೇನೆ ಎಂದು ಬದುಕಿನ ಸತ್ಯ ಬಿಚ್ಚಿಟ್ಟರು.
ಗಂಡಾಗಲಿ, ಹೆಣ್ಣಾಗಲಿ, ಯಾರೇ ಆಗಲಿ ಪ್ರತಿಯೊಬ್ಬರಿಗೂ ಒಂದು ಬದುಕಿದೆ. ಅದನ್ನು ಹುಡುಕಿಕೊಂಡು ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕಿದೆ. ಪೋಷಕರು ಆಸೆ, ಆಕಾಂಕ್ಷೆ ಬದಿಗೊತ್ತಿ ಮಕ್ಕಳಿಗಾಗಿ ಜೀವನ ಸವೆಸುತ್ತಾರೆ. ಅದಕ್ಕೆ ಮೋಸ ಮಾಡಬಾರದು. ಕುಟುಂಬದಿಂದ ತಿರಸ್ಕೃತ ಆದ ಮೇಲೆ ಗುರುಗಳ ಆಶೀರ್ವಾದದೊಂದಿಗೆ ಹಳ್ಳಿಯಿಂದ ದೆಹಲಿವರೆಗೆ ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹಾದಿ ಬಗ್ಗೆ ವಿವರಿಸಿದರು.ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ತುಂಬ ವ್ಯತ್ಯಾಸವಿದೆ. ಮುಂದೆ ಉನ್ನತ ಶಿಕ್ಷಣದ ಜತೆಗೆ ಕೌಶಲ್ಯ ಆಧಾರಿತ ಶಿಕ್ಷಣಬೇಕಿದೆ. ಹಾಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅಂದಾಗ ಮಕ್ಕಳು ಗುರಿ ಹೊಂದುತ್ತಾರೆ. ಗುರಿ ಸರಿಯಾಗಿದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಂಜಮ್ಮ ಜೋಗತಿ ಉದಾಹರಣೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಸಂಕ್ಷಿಪ್ತ ಮಾಹಿತಿಯುಳ್ಳ ಸ್ಮರಣ ಸಂಚಿಕೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಹಂಪಿ ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ವಿಶೇಷ ಉಪನ್ಯಾಸ ನೀಡಿದರು.
ಎಎಸ್ಪಿ ನವೀನ್‌ಕುಮಾರ್, ರಾಜ್ಯ ಕ್ರೈಸ್ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಗದೀಶ ಕಣಕಾಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ದಿವಾಕರ, ಜಿಲ್ಲಾ ಸಮನ್ವಯಾಧಿಕಾರಿ ಹಾಗೂ ಬಂಡ್ರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಸನ್ನಕುಮಾರ್ ಟಿ.ವೈ. ಉಪಸ್ಥಿತರಿದ್ದರು.